ಹುಬ್ಬಳ್ಳಿ, ಸ.12 (DaijiworldNews/HR): "ಕಾಂಗ್ರೆಸ್ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ಅವರು ಬಿಜೆಪಿ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳುತ್ತಾರೆ. ಚುನಾವಣೆಗೂ ಮುಂಚೆಯೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆದಿದ್ದು, ಅವರಲ್ಲಿರುವ ನಾಯಕತ್ವದ ಬಿಕ್ಕಟ್ಟನ್ನು ಮೊದಲು ಸರಿಪಡಿಸಿಕೊಳ್ಳಲಿ" ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯಲ್ಲಿ ನಾಯಕತ್ವದ ಬಿಕ್ಕಟ್ಟಿಲ್ಲ. ಸಾಮೂಹಿಕವಾಗಿಯೇ ಪಾಲಿಕೆ ಚುನಾವಣೆಯನ್ನು ಎದುರಿಸಿದ್ದೇವೆ. ಹಾಗಾಗಿಯೇ ಬೆಳಗಾವಿಯಲ್ಲಿ ಪಕ್ಷವು ನಿಚ್ಚಳ ಬಹುಮತ ಪಡೆದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚು ಸ್ಥಾನ ಪಡೆದಿದ್ದು, ಸತತ ಮೂರನೇ ಬಾರಿ ನಾವೇ ಅಧಿಕಾರಕ್ಕೆ ಬರುವುದು ನಿಶ್ಚಿತ" ಎಂದರು.
ಇನ್ನು ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಕುರಿತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಚಿವ ಆರ್. ಅಶೋಕ ಅವರು ಮಾತುಕತೆ ನಡೆಸಿದ್ದು, ಅಂತಿಮವಾಗಿ ಅಲ್ಲೂ ನಾವೇ ಅಧಿಕಾರಕ್ಕೆ ಬರಲಿದ್ದೇವೆ" ಎಂದು ಹೇಳಿದ್ದಾರೆ.