ಬಳ್ಳಾರಿ, ಸೆ.12 (DaijiworldNews/PY): "ನಾವು ಹಿಂದೂವಾದಿಗಳು, ಯಾವ ಜಾತಿಗೂ ಅನ್ಯಾಯ ಮಾಡಲ್ಲ. ಆದರೆ, ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಜಾತಿ ಹೆಸರು ಬಳಕೆ ಮಾಡುತ್ತಿದ್ದಾರೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ಸಿಗರು ಸೋಲಿನ ಭೀತಿಯಿಂದಾಗಿ ಜಾತಿಗಣತಿ ವರದಿ ಬಿಡುಗಡೆ ಮಾಡಿಲ್ಲ. ಇದೀಗ ಈ ಬಗ್ಗೆ ಬಿಜೆಪಿ ವಿರುದ್ದ ಆರೋಪ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಜಾತಿಗಣತಿ ಕುರಿತು ಮಾತನಾಡಬೇಡಿ ಎಂದಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಜಾತಿಗಣತಿ ವರದಿ ಸಿದ್ದವಾಗದೇ ಇರಲು ಕಾರಣ. ವರದಿಯನ್ನು ಸಿದ್ದರಾಮಯ್ಯ ಅವರು ಸಾಯಿಸಿದ್ದಾರೆ. ಅದನ್ನು ಡಿ.ಕೆ ಶಿವಕುಮಾರ್ ಅವರು ಹೂತುಹಾಕಿದ್ದಾರೆ ಅಷ್ಟೆ" ಎಂದಿದ್ದಾರೆ.
"ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭ ಜಾತಿಗಣತಿ ವರದಿಯನ್ನು ಚುನಾವಣೆ ಬರುವುದರೊಳಗೆ ಮಂಡಿಸುವುದಾಗಿ ತಿಳಿಸಿದ್ದರು. ಆದರೆ, ಇದೀಗ ಕಾಂತರಾಜು ವರದಿಯನ್ನು ಸರ್ಕಾರ ನೀಡಲಿಲ್ಲ ಎಂದು ಆರೋಪಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಜಾತಿಗಣತಿ ವರದಿಯನ್ನು ಸಮ್ಮಿಶ್ರ ಸರ್ಕಾರದ ಅವಧಿ ಇರುವಾಗಲೂ ಬಿಡುಗಡೆ ಮಾಡಿಲ್ಲ. ಕುಮಾರ್ಸವಾಮಿ ಅವರು ಕೇಳಿದರೆ ನನ್ನನ್ನು ಸಿದ್ದರಾಮಯ್ಯ ಅವರು ಕೇಳಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ವರದಿಯ ಮೇಲೆ ಕಾಂಗ್ರೆಸ್ಗೆ ನಂಬಿಕೆ ಇರುತ್ತಿದ್ದರೆ ಅನ್ಯಾಯ ಮಾಡುತ್ತಿರಲಿಲ್ಲ" ಎಂದು ತಿಳಿಸಿದ್ದಾರೆ.