ಬೆಂಗಳೂರು, ಸೆ.12 (DaijiworldNews/PY): "ಬಿಜೆಪಿಗೆ ಬೇಕಿರುವುದು ಅಧಿಕಾರವಷ್ಟೇ ಅಭಿವೃದ್ಧಿಯಲ್ಲ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಬಿಜೆಪಿಗೆ ಬೇಕಿರುವುದು ಅಧಿಕಾರವಷ್ಟೇ ಅಭಿವೃದ್ಧಿಯಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ನೀಡಬೇಕಿದ್ದ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡಿಲ್ಲ, ರಾಜ್ಯ ಸರ್ಕಾರ ಪೂರ್ಣ ಅನುದಾನ ನೀಡಿಲ್ಲ" ಎಂದಿದೆ.
"ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣ ಕಡೆಗಣಿಸಿರುವ ಬಿಜೆಪಿ ಯಾವ ನೈತಿಕತೆಯಲ್ಲಿ ಕಲಬುರಗಿಯ ಪಾಲಿಕೆ ಅಧಿಕಾರಕ್ಕಾಗಿ ಹಪಹಪಿಸುತ್ತಿದೆ?" ಎಂದು ಪ್ರಶ್ನಿಸಿದೆ.
"ಬಿಜೆಪಿಯ ಘೋಷಣೆಗಳು ಪ್ರಚಾರಕ್ಕಾಗಿ ಹೊರತು ಉಪಯೋಗಕ್ಕಾಗಿ ಅಲ್ಲ. ಕರೋನಾದಿಂದ ಮೃತರಾದ ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ಪರಿಹಾರ ನೀಡುತ್ತೇವೆ ಎಂದಿದ್ದರು. ಆದರೀಗ ಹಣ ನೀಡುವುದಿರಲಿ, ಅರ್ಜಿ ಸ್ವೀಕಾರ ಪ್ರಕ್ರಿಯೆಯೇ ಶುರುವಾಗಿಲ್ಲ. ಇದಲ್ಲದೆ ಲಾಕ್ಡೌನ್ ಪರಿಹಾರ ₹2000 ಕೂಡ ಕಾರ್ಮಿಕರ ಕೈಸೇರಿಲ್ಲ. ಕೇವಲ ಬಂಡಲ್ಗಳೇ ಬಿಜೆಪಿಯ ಬಂಡವಾಳ!" ಎಂದು ಕಿಡಿಕಾರಿದೆ.