ಬೆಂಗಳೂರು, ಸೆ.12 (DaijiworldNews/PY): "ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಅಕ್ರಮ ಸಂತಾನ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಬಿಜೆಪಿ ಸೇರಲು ಬಿಜೆಪಿಯವರು ಹಣದ ಆಫರ್ ನೀಡಿದ ಬಗ್ಗೆ ಸ್ವತಃ ಒಪ್ಪಿಕೊಂಡಿದ್ದಾರೆ. 17 ಶಾಸಕರನ್ನು ಬಿಜೆಪಿ ಅಕ್ರಮ ದುಡ್ಡಿನಿಂದ ಖರೀದಿಸಿದೆ ಎಂಬುದು ಕೊನೆಗೂ ನಿಜವಾಗಿದೆ. ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಅಕ್ರಮ ಸಂತಾನ. ಹಾಗಾದರೆ ಶಾಸಕರ ಖರೀದಿಗೆ ಬಳಕೆಯಾದ ಹಣದ ಮೂಲ ಯಾವುದು?" ಎಂದು ಪ್ರಶ್ನಿಸಿದ್ದಾರೆ.
"ಆಪರೇಷನ್ ಕಮಲ ಎಂಬ ಅನಿಷ್ಟ ಸಂತತಿಯ ಸೃಷ್ಟಿಕರ್ತರಾದ ಬಿಜೆಪಿಯವರು 17 ಶಾಸಕರ ಖರೀದಿಗೆ ಕೋಟಿ ಕೋಟಿ ಸುರಿದಿರುವುದು ಸತ್ಯ. 'ನಾ ಕಾವೂಂಗಾ ನಾ ಕಾನೇ ದೂಂಗಾ' ಎಂದು ಪೋಸ್ ಕೊಡುವ ಮೋದಿಯವರೆ, ಕರ್ನಾಟಕದಲ್ಲಿ 17 ಶಾಸಕರ ಖರೀದಿಗೆ ಸುರಿದ ಅಕ್ರಮ ಹಣ ಯಾರು ತಿಂದು ವಿಸರ್ಜನೆ ಮಾಡಿದ ಹಣ ಎಂದು ಹೇಳುವಿರಾ? ಈ ಅಕ್ರಮ ಹಣದ ಮೂಲದ ಬಗ್ಗೆ ತನಿಖೆ ನಡೆಸುವಿರಾ?" ಎಂದು ಕೇಳಿದ್ದಾರೆ.
"ಸಂವಿಧಾನಬದ್ಧವಾಗಿ ಚುನಾಯಿತವಾದ ಸರ್ಕಾರವನ್ನು ಸಂವಿಧಾನಬಾಹಿರವಾಗಿ ಕೆಡವುವ ಹೀನ ಸಂಸ್ಕೃತಿ ಬಿಜೆಪಿಯವರದ್ದು. ಪಕ್ಷಾಂತರ ನಿಷೇಧ ಕಾಯ್ದೆಗೆ ಮಸಿ ಬಳಿದ ಬಿಜೆಪಿ ದುಷ್ಟರ ಕೂಟವಿದ್ದಂತೆ. ರಾಜ್ಯದಲ್ಲಿ 17 ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರಕ್ಕೆ ಅಧಿಕಾರದಲ್ಲಿಳಿಯುವ ಯಾವುದೇ ನೈತಿಕತೆಯಿಲ್ಲ. ಬಿಜೆಪಿಯವರ ಭ್ರಷ್ಟರ ಸರ್ಕಾರವಿದು" ಎಂದು ಕಿಡಿಕಾರಿದ್ದಾರೆ.
"ಕೇಂದ್ರ ಸರ್ಕಾರ ಅಡುಗೆ ಎಣ್ಣೆಗಳ ಆಮದು ಸುಂಕವನ್ನು ಶೇ2.11%ರಷ್ಟು ಇಳಿಸಿ, ಲೀಟರ್ ಎಣ್ಣೆಗೆ 4 ರೂಪಾಯಿ ಕಡಿಮೆ ಮಾಡಿದೆ. ಜನಸಾಮಾನ್ಯರಿಗೆ ಮೋದಿ ಸರ್ಕಾರ ಹಬ್ಬಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಿದು. 80 ರೂಪಾಯಿ ಇದ್ದ ಅಡುಗೆ ಎಣ್ಣೆ ದರವನ್ನು 160 ರೂಪಾಯಿಗೆ ಏರಿಸಿದ್ದು ಇದೇ ಕೇಂದ್ರ ಸರ್ಕಾರ. ಈಗ 4 ರೂಪಾಯಿ ಇಳಿಸಿದ್ದೇ ಕೇಂದ್ರದ ಮಹಾನ್ ಸಾಧನೆ" ಎಂದು ವ್ಯಂಗ್ಯವಾಡಿದ್ದಾರೆ.