ಹುಬ್ಬಳ್ಳಿ, ಸೆ.12 (DaijiworldNews/PY): "ಕಲಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಎದುರಾಗಿದ್ದು, ಬಿಜೆಪಿ ಆಪರೇಷನ್ ಕಮಲ ಮಾಡುವ ಸಾಧ್ಯತೆ ಇದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಲಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿರುವ ಹಿನ್ನೆಲೆ ಅಧಿಕಾರ ಹಿಡಿಯಲು ಬಿಜೆಪಿ ಆಪರೇಷನ್ ಕಮಲ ಮಾಡುವ ಸಾಧ್ಯತೆ ಇದೆ. ಮೇಯರ್ ಚುನಾವಣೆ ಘೋಷಣೆಯಾದ ನಂತರ ಈ ಕುರಿತು ಮಾತನಾಡೋಣ" ಎಂದಿದ್ದಾರೆ.
"ಬೆಳಗಾವಿಯಲ್ಲಿ ನಾವು 20 ಸ್ಥಾನಗಳನ್ನು ನಿರೀಕ್ಷೆ ಮಾಡಿದ್ದೆವು. ಆದರೆ, ನಾವು 12 ಸ್ಥಾನಗಳಲ್ಲಿ ಜಯ ಸಾಧಿಸಿದ್ದೇವೆ. ಬಿಜೆಪಿಯವರು ಇನ್ನು ಮುಂದಿನ ಸ್ಥಳೀಯ ಚುನಾವಣೆಗಳನ್ನು ನಡೆಸಲಿ. ನಾವು ಅವರಿಗೆ ಸರ್ಟಿಫಿಕೇಟ್ ಕೊಡುವುದಿಲ್ಲ. ಬದಲಾಗಿ ಜನರೇ ನೀಡುತ್ತಾರೆ. ಬಿಜೆಪಿ, ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ರಾಜಕಾರಣ ಮಾಡಲಿದೆ" ಎಂದು ಕಿಡಿಕಾರಿದ್ದಾರೆ.
"ಸೋಮವಾರ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ನಾವು ಸದನದಲ್ಲಿ ಕೊರೊನಾ ವಿಚಾರವಾಗಿ ಚರ್ಚಿಸುತ್ತೇವೆ. ಕೊರೊನಾದಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಲಿ. ಅಲ್ಲದೇ ಮಹಾದಾಯಿ ಹಾಗೂ ಮೇಕೆದಾಟು ಬಗ್ಗೆ ಮಾತನಾಡಲಿ. ಮೊದಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಈ ಬಗ್ಗೆ ಮಾತನಾಡಲಿ" ಎಂದು ಹೇಳಿದ್ದಾರೆ.