ಕೋಲ್ಕತ್ತ,ಸ.12 (DaijiworldNews/HR): ಪಶ್ಚಿಮ ಬಂಗಾಳದ ಜನತೆಯ ಹಕ್ಕಿಗಾಗಿ ನನ್ನ ಹೋರಾಟ ಎಂದು ಭವಾನಿಪುರ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಪಶ್ಚಿಮ ಬಂಗಾಳ ಜನರಿಗೂ ಬದುಕುವ ಹಕ್ಕಿದ್ದು, ಈ ಹಕ್ಕನ್ನು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಸಿದುಕೊಂಡಿದೆ" ಎಂದು ಆರೋಪಿಸಿದ್ದಾರೆ.
ಇನ್ನು "ನನ್ನ ಎದುರು ಸ್ಪರ್ಧಿಸುತ್ತಿರುವ ಮಮತಾ ಬ್ಯಾನರ್ಜಿ ಈಗಾಗಲೇ ಚುನಾವಣೆಯಲ್ಲಿ ಸೋತಿದ್ದು, ಅದಕ್ಕಾಗಿಯೇ ಭವಾನಿಪುರ ಉಪಚುನಾವಣೆ ನಡೆಯುತ್ತಿದೆ. ಅವರು ಈಗಾಗಲೇ ಭವಾನಿಪುರದಲ್ಲಿ ಗೆದ್ದಿದ್ದಾರೆ. ಆದರೆ ಪ್ರಜಾಪ್ರಭುತ್ವ ಅಥವಾ ಜನಾದೇಶಕ್ಕೆ ಟಿಎಂಸಿ ಪಕ್ಷವು ಕಿಂಚಿತ್ತು ಗೌರವವನ್ನು ಕೊಡುತ್ತಿಲ್ಲ" ಎಂದರು.
ಭವಾನಿಪುರ ಉಪಚುನಾವಣೆಯು ಸೆಪ್ಟೆಂಬರ್ 30ರಂದು ನಡೆಯಲಿದ್ದು, ಅಕ್ಟೋಬರ್ 3ರಂದು ಫಲಿತಾಂಶ ಹೊರಬೀಳಲಿದೆ.