ಬೆಂಗಳೂರು, ಸೆ.12 (DaijiworldNews/PY): "ಕಲ್ಯಾಣ ಕರ್ನಾಟಕದ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸಬೇಕಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ನೂತನ 120 ಆಂಬ್ಯುಲೆನ್ಸ್ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, "ಯಾವ ಸಮಯದಲ್ಲಿ ಆರೋಗ್ಯ ಕೈಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಹಿನ್ನೆಲೆ ಆಂಬ್ಯುಲೆನ್ಸ್ಗಳ ಸೌಲಭ್ಯ ಅಗತ್ಯ. ಆಂಬ್ಯುಲೆನ್ಸ್ ವಾಹನಗಳು ತುರ್ತು ಚಿಕಿತ್ಸೆ ನೀಡುವ ರೀತಿಯಲ್ಲಿ ಇರಬೇಕು. ಕರೆ ಮಾಡಿದ ತಕ್ಷಣವೇ ಕಾರ್ಯನಿರ್ವಹಿಸಬೇಕು" ಎಂದಿದ್ದಾರೆ.
"ಕೊರೊನಾ ವೇಳೆ ರೋಗಿಗಳ ಸಂಕಷ್ಟವನ್ನು ನಾವು ನೋಡಿದ್ದೇವೆ. ಈ ಸಂದರ್ಭ ಆರೋಗ್ಯ ಎಷ್ಟು ಮುಖ್ಯ ಎಂದು ಗೊತ್ತಾಗಿದೆ. ಕೊರೊನಾ ನಮ್ಮ ಕಣ್ಣು ತೆರೆಸಿದೆ" ಎಂದು ಹೇಳಿದ್ದಾರೆ.
"ಕಲ್ಯಾಣ ಕರ್ನಾಟಕದ ಭಾಗದಲ್ಲಿ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ಕೊರೊನಾ ವೇಳೆ ಕೆಲ ಅಡಚಣೆ ಉಂಟಾಯಿತು. ಹಾಗಾಗಿ ಸೋಂಕಿತರನ್ನು ರಿಜಿಸ್ಟರ್ ಮಾಡಲು ಕಷ್ಟವಾಯಿತು. ಇಂತಹ ಸಂಕಷ್ಟ ಸಂದರ್ಭ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಗಲಿರುಳು ಶ್ರಮಿಸಿದ್ದಾರೆ. ನನ್ನ ಪ್ರಕಾರ 108 ಆಂಬ್ಯುಲೆನ್ಸ್ಗಳನ್ನು ಸುಧಾರಿಸಬೇಕು" ಎಂದು ತಿಳಿಸಿದ್ದಾರೆ.