ಬೆಂಗಳೂರು, ಸೆ.12 (DaijiworldNews/PY): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶ್ಲಾಘಿಸಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್, "ಸಿಎಂ ಬಸವರಾಜ ಬೊಮ್ಮಾಯಿ ಅವರು ಜನಸಾಮಾನ್ಯರ ಸಿಎಂ" ಎಂದಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ 120 ನೂತನ 108 ಆರೋಗ್ಯ ಕವಚ ಅಂಬುಲೆನ್ಸ್ ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸುಧಾಕರ್, "ಈಗಾಗಲೇ ರಾಜ್ಯದಲ್ಲಿ 710 ಆಂಬ್ಯುಲೆನ್ಸ್ಗಳಿವೆ. ಇದರೊಂದಿಗೆ ಮತ್ತೆ 120 ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಆರೋಗ್ಯ ಸೇವೆಯಲ್ಲಿ ಇದೊಂದು ಮೈಲಿಗಲ್ಲು. ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಸೇವೆಯನ್ನು ಮತ್ತಷ್ಟು ಸುಧಾರಣೆ ಮಾಡಲು ಮನಸ್ಸು ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.
"ನೂತನವಾಗಿ ಟೆಂಡರ್ ಚಾಲನೆ ಮಾಡಲಾಗಿದೆ. ಈ ಟೆಂಡರ್ನಲ್ಲಿ ಆಸ್ಪತ್ರೆಗಳನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಆರೋಗ್ಯ ಸೇವೆ ಬಹಳ ಮುಖ್ಯ. ಇದರೊಂದಿಗೆ ಈ ಆಂಬ್ಯುಲೆನ್ಸ್ ಸೇವೆ ಕೂಡ ಮುಖ್ಯ. ಹಾಗಾಗಿ ರಾಜ್ಯದ ಜನರ ಸೇವೆಗಾಗಿ ನಾವು ಇದೀಗ ಮತ್ತೆ ಮುಂದಾಗಿದ್ದೇವೆ" ಎಂದು ಹೇಳಿದ್ದಾರೆ.
"ನಾವು ಕೊರೊನಾ ಲಸಿಕೆಯಲ್ಲಿ ಕೂಡಾ ಸಾಧನೆ ಮಾಡಿದ್ದೇವೆ. ಲಸಿಕೆ ನೀಡಿಕೆಯಲ್ಲಿ ನಮ್ಮ ರಾಜ್ಯ ರಷ್ಯಾವನ್ನು ಮೀರಿಸಿದೆ. ಶೀಘ್ರವೇ 5 ಕೋಟಿ ಲಸಿಕೆ ನಮ್ಮ ರಾಜ್ಯದಲ್ಲಿ ಆಗುತ್ತದೆ" ಎಂದಿದ್ದಾರೆ.