ಬೆಂಗಳೂರು, ಸ.12 (DaijiworldNews/HR): ನಾಳೆಯಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ವಿಧಾನಮಂಡಲ ಅಧಿವೇಶನ ಇದಾಗಿದೆ.
ರಾಜ್ಯದ ಹಲವು ಸಮಸ್ಯೆಗಳ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಇದನ್ನು ಎದುರಿಸಲು ಆಡಳಿತಪಕ್ಷ ಕೂಡ ಸಿದ್ಧವಾಗಿದೆ. ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿದೆ.
ವಿಪಕ್ಷ ಕಾಂಗ್ರೆಸ್ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಳಂಬ, ಬೆಲೆ ಏರಿಕೆ ಮತ್ತಿತರ ಅಸ್ತ್ರಗಳ ಮೂಲಕ ಸರಕಾರವನ್ನು ಹಣಿಯಲು ಕಾರ್ಯತಂತ್ರ ರೂಪಿಸಿದೆ. ಅದಕ್ಕೆ ತಿರುಗೇಟು ನೀಡಲು ಸಿಎಂ ಬೊಮ್ಮಾಯಿ ಸಂಬಂಧಿತ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿದ್ದು, ಜತೆಗೆ ಮಾಜಿ ಸಿಎಂಗಳಾದ ಎಸ್.ಎಂ. ಕೃಷ್ಣ, ಬಿಎಸ್ವೈ ಸಹಿತ ಹಲವು ಹಿರಿಯ ನಾಯಕರ ಸಲಹೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರ ಆರಂಭವಾಗಲಿರುವ ಅಧಿವೇಶನ ಹತ್ತು ದಿನ ನಡೆಯಲಿದ್ದು, ವಿಪಕ್ಷಗಳಿಂದ ಎಷ್ಟೇ ಪ್ರತಿಭಟನೆ, ಧರಣಿ ಎದುರಾದರೂ ಅಧಿ ವೇಶನ ಮೊಟಕುಗೊಳಿಸದೆ ಪೂರ್ಣ ಅವಧಿಯ ಕಲಾಪ ನಡೆಸಲು ಸರಕಾರ ತೀರ್ಮಾನಿಸಿದೆ.