ಬಿಜ್ನೋರ್, ಸೆ.12 (DaijiworldNews/PY): ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 24 ವರ್ಷದ ಮಾಜಿ ರಾಷ್ಟ್ರೀಯ ಖೋ ಖೋ ಆಟಗಾರ್ತಿಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬಿಜ್ನೋರ್ನ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಸ್ಲೀಪರ್ಗಳ ನಡುವೆ ಆಕೆ ಗಾಯಗೊಂಡು ಬಿದ್ದಿದ್ದು, ಹತ್ಯೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.
ಘಟನೆಯ ಬಗ್ಗೆ ನಜೀಬಾಬಾದ್ ಸರ್ಕಾರಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಸಂತ್ರಸ್ತೆ ಕುಟಿಯಾ ಕಾಲೋಮಿಯ ನಿವಾಸಿಯಾಗಿದ್ದು, ಶುಕ್ರವಾರ ಬೆಳಗ್ಗೆ ಶಾಲೆಗೆ ಬಯೋಡಾಟಾ ಸಲ್ಲಿಸಲು ಮನೆಯಿಂದ ಹೊರಟಿದ್ದರು. ಶಾಲೆಗೆ ಹೋದಾಕೆ ಇಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಆಕೆಯ ಪೋಷಕರು ಆಕೆಗೆ ಕರೆ ಮಾಡಿದ್ದು, ಈ ವೇಳೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ರೈಲ್ವೆ ಸ್ಲೀಪರ್ಗಳ ಬಳಿಕ ಆಕೆಯ ನೆರೆಹೊರೆಯವರು ಹಾದುಹೋಗುತ್ತಿದ್ದ ಸಂದರ್ಭ ಸಂತ್ರಸ್ತೆಯನ್ನು ಗುರುತಿಸಿದ್ದಾರೆ. ಸಂತ್ರಸ್ತೆ ಅರೆಅರೆಪ್ರಜ್ಞಾ ಸ್ಥಿತಿಯಲ್ಲಿದ್ದಳು. ಆಕೆಯ ಕುತ್ತಿಗೆಗೆ ದುಪ್ಪಟ್ಟಾ ಬಿಗಿಯಲಾಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದಿದ್ದಾರೆ.
"ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಸಿಒ ಸಿಟಿ ಕುಲದೀಪ್ ಗುಪ್ತಾ ತಿಳಿಸಿದ್ದಾರೆ.