ನವದೆಹಲಿ, ಸೆ. 12 (DaijiworldNews/PY): "ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಕಳೆದ 70 ವರ್ಷಗಳಲ್ಲಿ ಸ್ಥಾಪಿಸಿದ ಎಲ್ಲವನ್ನೂ ಕೇವಲ ಏಳು ವರ್ಷಗಳಲ್ಲಿ ಬಿಜೆಪಿಯವರು ಮಾರಾಟ ಮಾಡಿದ್ದಾರೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (ಎನ್ಎಸ್ಯುಐ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಕಾಂಗ್ರೆಸ್ ಯಾವಾಗಲೂ ದೇಶ ನಿರ್ಮಾಣದತ್ತ ಗಮನಹರಿಸುತ್ತದೆ. ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಲ್ಲಿ ಸ್ಥಾಪಿಸಿದ ಎಲ್ಲವನ್ನೂ ಕೇವಲ ಏಳು ವರ್ಷಗಳಲ್ಲಿ ಬಿಜೆಪಿಯವರು ಮಾರಾಟ ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮುಂಬೈಯಲ್ಲಿ ಭಯೋತ್ಪಾದಕ ಸಭೆ ನಡೆದ ವೇಳೆ ಮನಮೋಹನ್ ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎನ್ನಲಾಗುತ್ತಿತ್ತು. ಆದರೆ, ಪುಲ್ವಾಮ ದಾಳಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕೆ ಮಾಧ್ಯಮಗಳು ಪ್ರಶ್ನಿಸಿಲ್ಲ?" ಎಂದು ಕೇಳಿದ್ದಾರೆ.
ಈ ಸಂದರ್ಭ ರಾಹುಲ್ ಗಾಂಧಿ ಅವರು, ಕೊರೊನಾ ಸಂಕಷ್ಟದ ಸಂದರ್ಭ ಶ್ರಮಿಸಿದ್ದ ಎನ್ಎಸ್ಯುಐ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.