ಮೈಸೂರು, ಸೆ. 11 (DaijiworldNews/PY): ನಂಜನಗೂಡು ಐತಿಹಾಸಿಕ ಹಿಂದೂ ದೇವಾಲಯವನ್ನು ಕೆಡವಿರುವ ಕ್ರಮವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಚಾರವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಬಿಜೆಪಿ ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು" ಎಂದಿದ್ದಾರೆ.
"ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆನಪಾಗಲಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ದೇವಸ್ಥಾನ ಕೆಡವಿ ಹಾಕಿದ ಘಟನೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನಿಷ್ಪಕ್ಷಪಾತ ತನಿಖೆ ನಡೆಸಿ ಕಾರಣಕರ್ತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
"ಹೊಸ ನಿವೇಶನ ಮಂಜೂರು ಮಾಡಿ ಸರ್ವರನ್ನೂ ವಿಶ್ವಾಸಕ್ಕೆ ಪಡೆದು ನೂತನ ದೇವಸ್ಥಾನವನ್ನು ರಾಜ್ಯ ಬಿಜೆಪಿ ಸರ್ಕಾರವೇ ನಿರ್ಮಿಸಿಕೊಡಬೇಕು" ಎಂದು ಆಗ್ರಹಿಸಿದ್ದಾರೆ.