ನವದೆಹಲಿ, ಸೆ. 11 (DaijiworldNews/PY): ಆಮ್ ಆದ್ಮಿ ನಾಯಕರಿಗೆ ಸಲಹೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, "ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಪದವಿ ಹಾಗೂ ಟಿಕೆಟ್ಗಳ ಆಸೆ ಇಟ್ಟುಕೊಳ್ಳಬಾರದು. ಬದಲಾಗಿ, ಸಮಾಜ ಹಾಗೂ ದೇಶಕ್ಕಾಗಿ ಕೆಲಸ ಮಾಡುವ ಮೂಲಕ ತಮ್ಮ ಯೋಗ್ಯತೆ ಸಾಬೀತುಪಡಿಸಬೇಕು" ಎಂದು ತಿಳಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, "ಜನರು ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಗುರುತಿಸಿದಂತೆ ಎಎಪಿಯನ್ನು ಗುರುತಿಸಲು ನಾನು ಇಚ್ಛಿಸುವುದಿಲ್ಲ. ಈ ಹಿನ್ನೆಲೆ ಪದವಿ ಹಾಗೂ ಟಿಕೆಟ್ ಆಸೆ ಇಟ್ಟುಕೊಳ್ಳಬಾರದು" ಎಂದು ನಾಯಕರಿಗೆ ತಿಳಿಸಿದ್ದಾರೆ.
"ನನ್ನ ಬಳಿ ಬಂದು ನೀವು ಪದವಿ ಬಯಸಿದರೆ, ಅದರ ಅರ್ಥ ಅದಕ್ಕೆ ನೀವು ಅರ್ಹರಲ್ಲ. ಬದಲಾಗಿ ನೀವು ಹುದ್ದೆ ವಹಿಸುವಂತೆ ಖುದ್ದಾಗಿ ನಾನೇ ಹೇಳುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇ"ಕು ಎಂದಿದ್ದಾರೆ.
"ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಇವರಿಬ್ಬರೂ ಆದರ್ಶ ವ್ಯಕ್ತಿಗಳು. ಅವರಂತೆ ತ್ಯಾಗ ಮಾಡಲು ಪಕ್ಷದ ಪ್ರತಿಯೋರ್ವ ಕಾರ್ಯಕರ್ತರು ಸಿದ್ದರಾಗಬೇಕು" ಎಂದು ತಿಳಿಸಿದ್ದಾರೆ.