ಬೆಂಗಳೂರು, ಸೆ. 11 (DaijiworldNews/PY): "ನಾಯಕತ್ವ ಬದಲಾದರೂ, ಸಿಎಂ ಬದಲಾದರೂ ಕರ್ನಾಟಕದೆಡೆಗಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮಾತ್ರ ಬದಲಾಗದು. ನೂತನ ಸಿಎಂ ಕೆಲವೇ ದಿನಗಳಲ್ಲಿ ನಾಲ್ಕು ಬಾರಿ ದೆಹಲಿಗೆ ಹೋಗಿಬಂದರೂ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲದಾಗಿದೆ" ಎಂದು ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ನಾಯಕತ್ವ ಬದಲಾದರೂ, ಸಿಎಂ ಬದಲಾದರೂ ಕರ್ನಾಟಕದೆಡೆಗಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಮಾತ್ರ ಬದಲಾಗದು. ನೂತನ ಸಿಎಂ ಕೆಲವೇ ದಿನಗಳಲ್ಲಿ ನಾಲ್ಕು ಬಾರಿ ದೆಹಲಿಗೆ ಹೋಗಿಬಂದರೂ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲದಾಗಿದೆ. ಜಿಎಸ್ಟಿ ಬಾಕಿ ಕೊಡಲಿಲ್ಲ, ಲಸಿಕೆ ಕೊರತೆ ನೀಗಲಿಲ್ಲ, ನೆರೆ ಪರಿಹಾರವೂ ಇಲ್ಲ, ನರೇಗಾ ಕೂಲಿ ಬಾಕಿಯೂ ಬರಲಿಲ್ಲ" ಎಂದು ಕಿಡಿಕಾರಿದೆ.
"ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಮೂರು ವಾರಗಳ ಕಾಲ ಸಂಭ್ರಮಾಚರಣೆ ಮಾಡಲು ಬಿಜೆಪಿ ಮುಂದಾಗಿದೆ. ಯಾವ ಸಾಧನೆಗಾಗಿ ಈ ಸಂಭ್ರಮ? ಕಳಪೆ ಕರೋನಾ ನಿರ್ವಹಣೆಯಿಂದ ಜನರನ್ನು ಕೊಂದಿದ್ದಕ್ಕಾ? ಆಕ್ಸಿಜನ್ ನೀಡದೆ ನರಳಿಸಿದ್ದಕ್ಕಾ? ನಿರುದ್ಯೋಗ ಸೃಷ್ಟಿಸಿದ್ದಕ್ಕಾ? ಬೆಲೆ ಏರಿಕೆಯಿಂದ ಜನರನ್ನು ಹಿಂಸಿಸುತ್ತಿರುವುದಕ್ಕಾ? ಆರ್ಥಿಕತೆ ಕುಸಿದಿದ್ದಕ್ಕಾ?" ಎಂದು ಪ್ರಶ್ನಿಸಿದೆ.
"ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನಿವಾರ್ಯತೆಯನ್ನ ಬಳಸಿಕೊಂಡು ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ದರ ವಿಧಿಸಿ ಸುಲಿಗೆ ನಡೆಸಿದ್ದಾರೆ, ಆದರೆ ಸಾರಿಗೆ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಖಾಸಗಿ ಬಸ್ಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲವೇ ಅಥವಾ ಖಾಸಗಿ ಲಾಭಿಗೆ ಮಣಿದಿದೆಯೇ? ಸರ್ಕಾರ ಕೂಡಲೇ ಕ್ರಮವಹಿಸಿ ಪ್ರಯಾಣಿಕರ ಹಿತ ಕಾಪಾಡಬೇಕು" ಎಂದಿದೆ.