ಬೆಂಗಳೂರು, ಸ.11 (DaijiworldNews/HR): ಡಿ.ಕೆ. ಶಿವಕುಮಾರ್ ಅವರು ತಮ್ಮ ಅಡುಗೆ ಮನೆಯಿಂದಲೇ ವಿಡಿಯೋವೊಂದನ್ನು ಮಾಡಿ 'ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗ್ಬೇಕಾ?' ಎಂದು ಪ್ರಶ್ನಿಸಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ಮನೆಯ ಅಡುಗೆ ಮನೆಯಿಂದಲೇ ವಿಡಿಯೊ ಮಾಡಿ ಟ್ವೀಟ್ ಮಾಡಿರುವ ಅವರು, "ಎಲ್ಪಿಜಿ ಸಿಲಿಂಡರ್ ಬೆಲೆ 888 ರೂಪಾಯಿಯಿಂದ ಸದ್ಯದಲ್ಲೇ 900ರಿಂದ 1000 ರೂಪಾಯಿವರೆಗೆ ಕೂಡಾ ತಲುಪಬಹುದು. ಕೊರೊನಾನಿಂದಾಗಿ ಜನ ಸಾಯುತ್ತಿದ್ದಾರೆ. ಕೆಲಸ ಕಳ್ಕೊಳ್ಳುತ್ತಿದ್ದಾರೆ. ಆದರೆ, ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ" ಎಂದಿದ್ದಾರೆ.
"ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಾನು ತಿರುಗಾಡಿ ಬಂದಿದ್ದು ಅಲ್ಲಿ ಬಡವರು, ಮಧ್ಯಮ ವರ್ಗದವರು, ಶ್ರೀಮಂತರನ್ನು ಎಲ್ಲರನ್ನೂ ನಾನು ಭೇಟಿಯಾಗಿ ಬಂದಿದ್ದೇನೆ. ಎಲ್ಲರೂ ಬೆಲೆ ಏರಿಕೆಯಿಂದ ಬೆಂದು ಹೋಗಿದ್ದಾರೆ. ಬಡ ಕುಟುಂಬದವರ ಮುಂದೆ ಸದ್ಯಕ್ಕೆ ಇರುವ ಆಯ್ಕೆ ಎರಡೇ. ಒಂದೋ ಮಕ್ಕಳ ಶಾಲೆಯಫೀಸ್ ಕಟ್ಟಬೇಕಾ ಅಥವಾ ಗ್ಯಾಸ್ ಸಿಲಿಂಡರ್ ಖರೀದಿಸಬೇಕಾ. ಪೋಷಕರು ಉದ್ಯೋಗ ಕಳೆದುಕೊಂಡ ಹಿನ್ನೆಲೆ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತಿದ್ದಾರೆ. ನಿರುದ್ಯೋಗದಿಂದ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ನ್ಯಾಯನಾ ಇಲ್ಲವಾ ಅನ್ನೋದನ್ನು ತಾವೇ ತೀರ್ಮಾನ ಮಾಡಬೇಕು" ಎಂದಿದ್ದಾರೆ.