ನವದೆಹಲಿ, ಸೆ 11 (DaijiworldNews/MS): ವಿಶ್ವಾದ್ಯಂತ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರೋಗ್ಯದ ವ್ಯವಸ್ಥೆ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ರಾಜ್ಯಗಳು ಸಂಭವನೀಯ ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಲು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಮೂರನೇ ಅಲೆಗೆ ನಡೆಸಬೇಕಾದ ಸಿದ್ಧತೆಗಳು, ವೈದ್ಯಕೀಯ ಉಪಕರಣಗಳು, ಔಷಧಗಳು, ಮಾನವ ಶಕ್ತಿ ಸೇರಿದಂತೆ ಎಲ್ಲ ಪ್ರಮುಖ ವಿಚಾರಗಳನ್ನು ಪ್ರಧಾನಮಂತ್ರಿ ಪರಿಶೀಲಿಸಿದ್ದಾರೆ.
ರೂಪಾಂತರಿ ವೈರಸ್ಗಳನ್ನು ಬಗ್ಗೆ ನಿರಂತರ ಕಣ್ಗಾವಲಿಡಲು ಬೇಕಾದ ಜೀನೋಮ್ ಸೀಕ್ವೆನ್ಸಿಂಗ್ನ ಅಗತ್ಯತೆಯ ಬಗ್ಗೆಯೂ ಪ್ರಧಾನಿ ಪರಿಶೀಲಿಸಿದ್ದಾರೆ.
ವಿಶ್ವದ ಬಹಳಷ್ಟು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಭಾರತದಲ್ಲಿ ಸೋಂಕಿನ ಪ್ರಮಾಣ ಕಳೆದ 10 ವಾರಗಳಿಂದಲೂ ಶೇ.3ರ ಒಳಗೆ ಇದೆ. ಆದರೆ, ಕೇರಳ ಮತ್ತು ಮಹಾರಾಷ್ಟ್ರದಲ್ಲಿನ ಪರಿಸ್ಥಿತಿಯ ಬಗ್ಗೆ ಸಮಾಧಾನ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ ಎನ್ನಲಾಗಿದೆ.
ಕೋವಿಡ್ ಚಿಕಿತ್ಸೆಗೆ ಅಗತ್ಯವಾಗಿರುವ ಮ್ಯೂಕೋರ್ಮೈಕೋಸಿಸ್ ಸೇರಿದಂತೆ ಇತರ ಔಷಧಿಗಳನ್ನು ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಬೇಕು. 'ಕೋವಿಡ್ ಎಮರ್ಜೆನ್ಸಿ ರೆಸ್ಪಾನ್ಸ್ ಪ್ಯಾಕೇಜ್ II' ಅಡಿಯಲ್ಲಿ ಮಕ್ಕಳ ಆರೈಕೆಗಾಗಿ ಹಾಸಿಗೆ ಸಾಮರ್ಥ್ಯ ಹೆಚ್ಚಳ ಮತ್ತು ಬೆಂಬಲಿತ ಸೌಲಭ್ಯಗಳ ಹೆಚ್ಚಳ ಮಾಡಿಕೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ
ರಾಜ್ಯ ಸರ್ಕಾರಗಳು ಪೂರ್ವ ಸಿದ್ಧತೆ ಕೈಗೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ 23 ಸಾವಿರ ಕೋಟಿ ರೂ.ಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಿದೆ. ಅದರಲ್ಲಿ ಆಮ್ಲಜನಕದ ಲಭ್ಯತೆ, ಆಮ್ಲಜನಕದ ಕಾನ್ಸಂಟ್ರೇಟರ್ಸ್, ಸಿಲಿಂಡರ್ಗಳು, ಉತ್ಪಾದಕ ಘಟಕಗಳು, ದಾಸ್ತಾನು ಟ್ಯಾಂಕರ್ಗಳು, ಸಾಗಾಣಿಕ ವಾಹನಗಳನ್ನು ಸಜ್ಜುಗೊಳಿಸಿಕೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜನರಿಗೆ ಸುಲಭವಾಗಿ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.