ಬೆಳಗಾವಿ, ಸೆ. 11 (DaijiworldNews/PY): "ನಮ್ಮ ಸರ್ಕಾರದಲ್ಲಿ ಮಾಫಿಯಾಗಳಿಗೆ ಯಾವುದೇ ರೀತಿಯಾದ ಅವಕಾಶಗಳಿಲ್ಲ" ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾನು ನೀರಾವರಿ ಮಂತ್ರಿಯಾಗಿ ಒಂದು ತಿಂಗಳಾಗಿದೆ. ಈ ಅವಧಿಯಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಎರಡು ಬಾರಿ ದೆಹಲಿಗೆ ಹೋಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ನಮಗೆ ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಬರಲಿದೆ. ಇದಲ್ಲದೇ, ಕಾಮಗಾರಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದೇನೆ. ನಮ್ಮ ಪಾಲಿನ ನೀರನ್ನು ಉಪಯೋಗಿಸಿಕೊಳ್ಳಲು ಎಲ್ಲಾ ರೀತಿಯಾದ ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದಿದ್ದಾರೆ.
"ಬೆಳಗಾವಿಗೆ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡುವ ಸಲುವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅಬರು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಐತಿಹಾಸಿಕ ನಗರ ಎಂದು ಸಾಬೀತಪಡಿಸಬೇಕು ಎಂದು ತೀರ್ಮಾನಿಸಿದ್ದು, ಹಲವಾರ ಅಭಿವೃದ್ದಿ ಕಾರ್ಯಗಳು ಆಗಬೇಕು ಎನ್ನುವ ಕುರಿತು ಶಾಸಕರು ಸೇರಿದಂತೆ ಸಂಸದರು ನಿರ್ಧರಿಸುತ್ತಾರೆ. ಬಜೆಟ್ನಲ್ಲಿ ಬೆಳಗಾವಿಯ ಬೈಪಾಸ್ ರಸ್ತೆಗೆ ಘೋಷಣೆ ಮಾಡಿದ್ದು, ಕಾಮಗಾರಿ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರವೇ ಈ ಕಾರ್ಯ ಆರಂಭವಾಗಲಿದೆ" ಎಂದು ತಿಳಿಸಿದ್ದಾರೆ.
"ಬೆಳಗಾವಿಯ ಕೆಲವು ಶಾಸಕರ ಒಗ್ಗಟ್ಟಿನ ಫಲವಾಗಿ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ವಹಿಸಲಿದೆ. ಕಲಬುರ್ಗಿಯಲ್ಲಿಯೂ ಕೂಡಾ ಶೇ.100ರಷ್ಟು ನಾವೇ ಅಧಿಕಾರಕ್ಕೆ ಬರುತ್ತೇವೆ" ಎಂದಿದ್ದಾರೆ.