ಬೆಂಗಳೂರು, ಸ.11 (DaijiworldNews/HR): ಕರ್ನಾಟಕದಲ್ಲಿ ಪರಿಸರ ವೃದ್ಧಿಗೆ ಮುಂದಿನ ಬಜೆಟ್ನಲ್ಲಿ ವಿಶೇಷ ಯೋಜನೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇದೇ ಮೊದಲ ಬಾರಿಗೆ ಪರಿಸರ ನಷ್ಟ ತಪ್ಪಿಸಲು ಯೋಜನೆ ತರಲು ಉದ್ದೇಶಿಸಲಾಗಿದ್ದು, ಆ ಮೂಲಕ ಪರಿಸರ ನಷ್ಟ ತಡೆಯಲು ಯತ್ನಿಸಲಾಗುವುದು" ಎಂದಿದ್ದಾರೆ.
ಇನ್ನು "ಈ ಹಿಂದೆ ನಮ್ಮ ಹಿರಿಯರು ಅರಣ್ಯ ಸಂರಕ್ಷಣೆ ಮಾಡಿದ್ದರಿಂದ ಇಂದು ನಾವಿದ್ದೇವೆ. ಹಿರಿಯರಂತೆ ನಾವು ಕೂಡಾ ಮುಂದಿನ ಪೀಳಿಗೆಯವರಿಗೆ ಪರಿಸರ, ಅರಣ್ಯ ಸಂರಕ್ಷಣೆ ಮಾಡಬೇಕಿದೆ. ಇತ್ತೀಚೆಗೆ ಪರಿಸರ ನಷ್ಟ ಹೆಚ್ಚಾಗುತ್ತಿದ್ದು, ಬಜೆಟ್ನಲ್ಲಿ ಪರಿಸರ ಕೊರತೆ ನೀಗಿಸುವ ಯೋಜನೆ ತರಬೇಕಿದೆ" ಎಂದರು.
"ಕಾಡು ಉಳಿಸಲು ಸರ್ಕಾರ ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದು, ಅತ್ಯಂತ ದಕ್ಷತೆಯಿಂದ ಕಾಡು ಉಳಿಸುವ ಕಾರ್ಯ ಆಗಬೇಕು.ಕಾಡಿನ ಜೊತೆಗೆ ಪ್ರಾಣಿಗಳ ಬಲಿ ಕಡಿಮೆ ಆಗಬೇಕು" ಎಂದು ಹೇಳಿದ್ದಾರೆ.