ಶಿವಮೊಗ್ಗ, ಸೆ. 11 (DaijiworldNews/PY): "ಈ ವರ್ಷ ಕೂಡಾ ಪಠ್ಯ ಕಡಿತಗೊಳಿಸಿದರೆ ಮುಂದಿನ ತರಗತಿಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ ಈ ವಿಚಾರದ ಬಗ್ಗೆ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ" ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ವರ್ಷ ಕೂಡಾ ಪಠ್ಯ ಕಡಿತಗೊಳಿಸಿದರೆ ಮುಂದಿನ ತರಗತಿಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ ಈ ವಿಚಾರದ ಬಗ್ಗೆ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯ ಬ್ರಿಡ್ಜ್ ಕೋರ್ಸ್ ಮಾಡುತ್ತಿದ್ದೇವೆ. ಸಿಲೆಬಸ್ ಪೂರ್ಣಗೊಂಡರೆ ಮಕ್ಕಳಿಗೆ ಲಾಭ" ಎಂದಿದ್ದಾರೆ.
"ಶಿಕ್ಷಕರ ರಜೆ ಕಡಿಮೆ ಮಾಡಿ ಸಿಲೆಬಸ್ ಪೂರ್ಣಗೊಳಿಸುವ ವಿಚಾರದ ಬಗ್ಗೆ ಯೋಚನೆ ಇದೆ. ಆದರೆ, ಈ ಕುರಿತು ಯಾವುದೇ ಚರ್ಚೆ ಆಗಿಲ್ಲ.ಮುಂಬರುವ ದಿನಗಳಲ್ಲಿ ಶಿಕ್ಷಕರ ಸಹಕಾರ ನೋಡಿ ಅಗತ್ಯವಿದ್ದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಶಿಕ್ಷಕರ ವರ್ಗಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಶಿಕ್ಷಕರ ವರ್ಗಾವಣೆ ಕಳೆದ ಮೂರು ವರ್ಷದಿಂದ ನೆನೆಗುದಿ ಬಿದ್ದಿದೆ. ಅಧ್ಯಾಪಕರು ಏಕೆ ಈ ರೀತಿಯಾಗಿ ವರ್ಗಾವಣೆ ಮಾಡುತ್ತಿದ್ದಾರೆ ತಿಳಿದಿಲ್ಲ. ಮೂರು ವರ್ಷದಿಂದ ಕೋರ್ಟ್ಗೆ ತೆರಳಿ ತಡೆಯಾಜ್ಞೆ ತರುತ್ತಿದ್ದಾರೆ. ಈ ಹಿನ್ನೆಲೆ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗುತ್ತದೆ" ಎಂದಿದ್ದಾರೆ.
1-5 ನೇ ತರಗತಿಯವರೆಗೆ ಶಾಲೆ ಆರಂಭಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಮ್ಮ ಶಿಕ್ಷಕರು 6,7,8 ನೇ ತರಗತಿಗಳನ್ನು ಉತ್ತಮವಾಗಿ ನಡೆಸುತ್ತಿದ್ದಾರೆ. ಸದ್ಯದಲ್ಲೇ 1-5ರವರೆಗೆ ಶಾಲೆ ಆರಂಭಿಸುವ ಕುರಿತು ತಾಂತ್ರಿ ಸಮಿತಿಯ ಮುಂದೆ ಚರ್ಚಿಸಿ, ಸಮಿತಿಯ ಅನುಮತಿ ಪಡೆದ ನಂತರ ಶಾಲೆ ಆರಂಭಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇನ್ನು ಮಂಗಳೂರು ಹಾಗೂ ಉಡುಪಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ವೇಳೆ ಕೊರೊನಾ ಹೆಚ್ಚಾದಲ್ಲಿ ತಕ್ಷಣವೇ ಶಾಲೆ ನಿಲ್ಲಿಸುವ ಅವಕಾಶ ಸರ್ಕಾರಕ್ಕಿದೆ. ಈ ಕುರಿತು ಕೊರೊನಾ ಹೆಚ್ಚಾದ ವೇಳೆ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.