ಚಿತ್ರದುರ್ಗ, ಸೆ. 11 (DaijiworldNews/PY): ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗಣೇಶ ಚತುರ್ಥಿ ಹಿನ್ನೆಲೆ ಶುಕ್ರವಾರ ಗ್ರಾಮದ ಯುವಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಆದರೆ, ತಡರಾತ್ರಿ ಯಾರೋ ದುಷ್ಕರ್ಮಿಗಳು ಗಣೇಶನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದ ಹಿರೇಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮದ ಯುವಕರು ಸತತ 14 ವರ್ಷಗಳಿಂದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿಕೊಂಡು ಹಬ್ಬ ಆಚರಿಸಿಕೊಂಡು ಬಂದಿದ್ದರು. ಈ ಬಾರಿ ಕೊರೊನಾ ನಡುವೆ ತರಾತುರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶನ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದು, ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.