ನವದೆಹಲಿ, ಸೆ. 11 (DaijiworldNews/PY): ಬಿಜೆಪಿ ಹಾಗೂ ಆರ್ಎಸ್ಎಸ್ ಜಮ್ಮು-ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಕೆಡವಲು ಯತ್ನಿಸುತ್ತಿವೆ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಸಂಬಿತ್ ಪಾತ್ರ, "ರಾಹುಲ್ ಗಾಂಧಿ ನೀಡಿರುವ ಈ ಹೇಳಿಕೆಗಳು ಬೇಜವಾಬ್ದಾರಿಯಿಂದ ಕೂಡಿದೆ. ಜಮ್ಮು-ಕಾಶ್ಮೀರದ ಸಮಸ್ಯೆಗಳು ಗಾಂಧಿ ಕುಟುಂಬದ ಪಾರಂಪರಿಕ ಬಳುವಳಿ" ಎಂದಿದ್ದಾರೆ.
"ಕಾಂಗ್ರೆಸ್, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಶ್ಮೀರಿ ಪಂಡಿತರನ್ನು ಮಾತ್ರವಲ್ಲದೇ, ಈ ಪ್ರದೇಶದ ಅಭಿವೃದ್ಧಿಯನ್ನು ಕೂಡಾ ಗಾಳಿಗೆ ತೂರಿದೆ" ಎಂದು ದೂರಿದ್ದಾರೆ.
"ಕಾಶ್ಮೀರಿ ಪಂಡಿತರ ಕಷ್ಟಗಳಿಗೆ ಕಾಂಗ್ರೆಸ್ ಹಾಗೂ ಅದರ ಸಮಾನ ಮನಸ್ಕ ಪಕ್ಷಗಳ ತುಷ್ಟೀಕರಣದ ರಾಜಕೀಯ ಕಾರಣ" ಎಂದಿದ್ದಾರೆ.
"ಜಮ್ಮು-ಕಾಶ್ಮೀರದ ಸಮಸ್ಯೆಗಳು ಗಾಂಧಿ ಕುಟುಂಬದ ಪಾರಂಪರಿಕ ಬಳುವಳಿಗಳು. ಜವಾಹರಲಾಲ್ ನೆಹರೂ ಅವರೇ ಕಾಶ್ಮೀರದ ಸಮಸ್ಯೆಗಳಿಗೆ ನೇರ ಕಾರಣ" ಎಂದು ಹೇಳಿದ್ದಾರೆ.
"ಜಮ್ಮು-ಕಾಶ್ಮೀರ ಸಂಯೋಜಿತ ಸಂಸ್ಕೃತಿ ಹೊಂದಿದ್ದು, ಬಿಜೆಪಿ ಹಾಗೂ ಆರ್ಎಸ್ಎಸ್ ಜಮ್ಮು-ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಕೆಡವಲು ಯತ್ನಿಸುತ್ತಿವೆ" ಎಂದು ಶುಕ್ರವಾರ ರಾಹುಲ್ ಗಾಂಧಿ ಹೇಳಿದ್ದರು.