ಜಾರ್ಖಂಡ್, ಸೆ 11 (DaijiworldNews/MS): ಆರ್ಎಸ್ಎಸ್ ಸಂಘಟನೆಗೆ 2025 ರಲ್ಲಿ100 ವರ್ಷ ತುಂಬಲಿದ್ದು, ಶತಮಾನೋತ್ಸದ ವೇಳೆ ಸಂಘಟನೆಯು ಪ್ರತಿ ಮನೆಯನ್ನೂ ತಲುಪಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಹೇಳಿದರು.
ಜಾರ್ಖಂಡ್ನಲ್ಲಿ ಸಂಘಟನೆಯ ಅವಲೋಕನಕ್ಕಾಗಿ ಮೂರು ದಿನಗಳ ಭೇಟಿಗಾಗಿ ಶುಕ್ರವಾರ ಧನಬಾದ್ ನಲ್ಲಿ ಆರ್ಎಸ್ಎಸ್ ಮುಖ್ಯಸ್ಥರು ಜಾರ್ಖಂಡ್ ಮತ್ತು ಬಿಹಾರದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದರು.
"ಸಂಘಟನೆಯು 2025 ರಲ್ಲಿ 100 ವರ್ಷ ತುಂಬಿದಾಗ, ಸ್ವಯಂ ಸೇವಕರು ಎಲ್ಲಾ ಗ್ರಾಮಗಳಲ್ಲಿ ಶಾಖೆಗಳ ವಿಸ್ತರಣೆಯೊಂದಿಗೆ ಪ್ರತಿ ಮನೆಗೂ ತಲುಪಬೇಕು ಎಂದು ಖಚಿತಪಡಿಸಿಕೊಳ್ಳಲು ಶ್ರಮಪಟ್ಟು ಕೆಲಸ ಮಾಡಬೇಕೆಂದು ಭಾಗವತ್ ನಮಗೆ ಸಲಹೆ ನೀಡಿದರು. ಆರ್ಎಸ್ಎಸ್ ಸದಸ್ಯರಿಗೆ ಅವರ ನಡವಳಿಕೆ ಹೇಗಿರಬೇಕು ಮತ್ತು ಅವರ ಜೀವನವನ್ನು ರಾಷ್ಟ್ರ ನಿರ್ಮಾಣಕ್ಕೆ ಹೇಗೆ ಮೀಸಲಿಡಬೇಕು ಎಂದು ತಿಳಿಸಲಾಗಿದೆ ಎಂದು " ಎಂದು ಸಭೆಯಲ್ಲಿ ಭಾಗವಹಿಸಿದ ಆರ್ಎಸ್ಎಸ್ ಅಧಿಕಾರಿಯೊಬ್ಬರು ಹೇಳಿದರು.
ಇದಕ್ಕೂ ಮುನ್ನ, ಭಾಗವತ್ ಅವರಿಗೆ ರಾಜ್ಯ ಬಿಜೆಪಿ ನಾಯಕರು ಮತ್ತು ಎಬಿವಿಪಿ ಮತ್ತು ಭಾರತೀಯ ಮಜ್ದೂರ್ ಸಂಘದ ಕಾರ್ಯಕರ್ತರು ಭವ್ಯವಾದ ಸ್ವಾಗತ ಕೋರಿದರು.
ಶನಿವಾರ ಮತ್ತು ಭಾನುವಾರ ಅವರು ರಾಜ್ಯದ ಆರ್ಎಸ್ಎಸ್ನ ವಿವಿಧ ಶಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆಯಲ್ಲಿ, ಅವರು ವಿವಿಧ ಕ್ಷೇತ್ರಗಳ 100 ಪ್ರಖ್ಯಾತರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.