ನವದೆಹಲಿ, ಸ.10 (DaijiworldNews/HR) : ಸದನದಲ್ಲಿ ಮುಂಗಾರು ಅಧಿವೇಶನದ ವೇಳೆ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಲಾಗಿರುವ ತನಿಖಾ ಸಮಿತಿಯ ಭಾಗವಾಗಲು ಕಾಂಗ್ರೆಸ್ ನಿರಾಕರಿಸಿದೆ.
ಈ ಕುರಿತು ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದು, "2021 ರ ಆಗಸ್ಟ್ 11 ರಂದು ಸದನದಲ್ಲಿ ನಡೆದ ಘಟನೆಗಳ ಕುರಿತು ತನಿಖಾ ಸಮಿತಿ ರಚಿಸುವುದು, ಸಂಸದರನ್ನು ಬೆದರಿಸಲು ಮೌನವಾಗಿ ವಿನ್ಯಾಸಗೊಳಿಸಿದಂತೆ ತೋರುತ್ತದೆ. ಇದು ಜನಪ್ರತಿನಿಧಿಗಳ ಧ್ವನಿಯನ್ನು ನಿಗ್ರಹಿಸುತದೆ. ಅಲ್ಲದೇ ಸರ್ಕಾರಕ್ಕೆ ಅನಾನುಕೂಲವಾಗಿರುವ ಎಲ್ಲವನ್ನು ಉದ್ದೇಶಪೂರ್ವಕವಾಗಿ ದೂರವಿಡುತ್ತದೆ. ಹೀಗಾಗಿ ತಾವು ನಿಸ್ಸಂದಿಗ್ಧವಾಗಿ ವಿಚಾರಣಾ ಸಮಿತಿ ರಚನೆಯನ್ನು ವಿರೋಧಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು "ದೇಶದ ಆರ್ಥಿಕತೆ, ರೈತರ ಪ್ರತಿಭಟನೆ, ಹಣದುಬ್ಬರ, ತೈಲ ಬೆಳೆ ಏರಿಕೆ, ನಿರುದ್ಯೋಗ ಸೇರಿದಂತೆ ಪ್ರಮುಖ ವಿಷಯಗಳ ಕುರಿತ ಚರ್ಚೆಗೆ ಕಾಂಗ್ರೆಸ್ ನೋಟಿಸ್ ನೀಡಿದರೂ, ತಮ್ಮ ಬೇಡಿಕೆಯನ್ನು ಸರ್ಕಾರ ಪರಿಗಣಿಸಿಲ್ಲ" ಎಂದು ಹೇಳಿದ್ದಾರೆ.