ಬೆಂಗಳೂರು, ಸೆ. 10 (DaijiworldNews/PY): "ಬಿಜೆಪಿ ಆಡಳಿತದಲ್ಲಿ ಜನರ ಮಾನಸಿಕ ಸ್ಥೈರ್ಯ ಕುಸಿದಿದೆ. ಹೋಗಿ ಸಾಯಿರಿ' ಎನ್ನುತ್ತಾ ಶವ ಸಂಸ್ಕಾರ ಭಾಗ್ಯ ನೀಡುವ ಸರ್ಕಾರವಿರುವಾಗ ಇನ್ನೇನಾದಿತು?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕೂಲಿ ಕೊಡಲು ಹಣವಿಲ್ಲದೆ ತಾನು ಬೆಳೆದ ಬೆಳೆಯನ್ನೇ ನೀಡುವ ಹಂತಕ್ಕೆ ಬಂದಿದ್ದಾನೆ ರೈತ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಯೋಜನೆ ರೂಪಿಸಬೇಕಾದ ಕೃಷಿ ಸಚಿವ ಹಾಗೂ ಬಿಜೆಪಿ ಸರ್ಕಾರ ರೈತರನ್ನೇ ಹೇಡಿಗಳು ಎನ್ನುತ್ತಾ, ರೈತರ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಈ ಸರ್ಕಾರ ಒಂದಾದರೂ ರೈತಸ್ನೇಹಿ ಯೋಜನೆ ರೂಪಿಸಿದೆಯೇ?" ಎಂದು ಕೇಳಿದೆ.
"ಬಿಜೆಪಿ ಆಡಳಿತದಲ್ಲಿ ಜನರ ಮಾನಸಿಕ ಸ್ಥೈರ್ಯ ಕುಸಿದಿದೆ, ಲಾಕ್ಡೌನ್ ನಂತರ ಆತ್ಮಹತ್ಯಾ ಪ್ರಕರಣಗಳು ಹೆಚ್ಚಿದ್ದಕ್ಕೆ ಜನರು ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು ಮುಖ್ಯ ಕಾರಣ. ನಿರುದ್ಯೋಗ, ಖಿನ್ನತೆಯಿಂದ ಜನರು ಬದುಕಿನ ಭರವಸೆ ಕಳೆದುಕೊಂಡಿದ್ದಾರೆ. 'ಹೋಗಿ ಸಾಯಿರಿ' ಎನ್ನುತ್ತಾ ಶವ ಸಂಸ್ಕಾರ ಭಾಗ್ಯ ನೀಡುವ ಸರ್ಕಾರವಿರುವಾಗ ಇನ್ನೇನಾದಿತು?" ಎಂದು ಪ್ರಶ್ನಿಸಿದೆ.