ನವದೆಹಲಿ, ಸ.10 (DaijiworldNews/HR): ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಕೋಮು ಸೌಹಾರ್ದತೆಯನ್ನು ಹಾಳು ಮಾಡಿದ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬಾರಾಬಂಕಿ ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ್, "ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ ಇತ್ಯಾದಿಗಳ ಮೇಲೆ ದ್ವೇಷವನ್ನು ಉತ್ತೇಜಿಸುವುದು), 188 (ಸಾರ್ವಜನಿಕ ಸೇವಕರ ಆದೇಶವನ್ನು ನಿರ್ಲಕ್ಷಿಸುವುದು), 269 (ಅಪಾಯಕಾರಿ ರೋಗವನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ), 270 (ರೋಗದ ಸೋಂಕು ಹರಡುವ ಸಾಧ್ಯತೆ)ಗಳ ಅನ್ವಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದರು.
ಉವೈಸಿ ಅವರು ತನ್ನ ಭಾಷಣದಲ್ಲಿ ಕೋಮು ಸೌಹಾರ್ದತೆಯನ್ನು ಹಾಳುಮಾಡುವ ಹೇಳಿಕೆಗಳನ್ನು ನೀಡಿದ್ದು, 100 ವರ್ಷಗಳಷ್ಟು ಹಳೆಯದಾದ ರಾಮ ಸನೇಹಿ ಘಾಟ್ ಮಸೀದಿಯನ್ನು ಸರ್ಕಾರವು ಧ್ವಂಸಗೊಳಿಸಿದ್ದು, ಅದರ ಅವಶೇಷಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಹೇಳಿದ್ದು, ಇದು ವಾಸ್ತವಕ್ಕೆ ವಿರುದ್ಧವಾಗಿದೆ" ಎಂದು ಯಮುನಾ ಪ್ರಸಾದ್ ಹೇಳಿದ್ದಾರೆ.