ನವದೆಹಲಿ, ಸೆ. 10 (DaijiworldNews/PY): "ಶಾಲೆಗಳನ್ನು ಮತ್ತೆ ಪ್ರಾರಂಭಿಸುವುದಕ್ಕೆ ಮಕ್ಕಳು ಕೊರೊನಾ ಲಸಿಕೆ ಪಡೆದಿರಬೇಕು ಎನ್ನುವ ಷರತ್ತನ್ನೂ ಯಾರೂ ವಿಧಿಸಿಲ್ಲ" ಎಂದು ಕೇಂದ್ರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
"ಯಾವುದೇ ವೈಜ್ಞಾನಿಕ ಸಂಸ್ಥೆ ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಸಂಘಗಳಾಗಲಿ ಈ ರೀತಿಯಾದ ಷರತ್ತನ್ನು ಹಾಕಿಲ್ಲ" ಎಂದಿದ್ದಾರೆ.
ನೀತಿ ಆಯೋಗದ ಸದಸ್ಯ ವಿ.ಕೆ ಪೌಲ್ ಈ ಬಗ್ಗೆ ಮಾಹಿತಿ ನೀಡಿದ್ದು, "ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ಸಂಪೂರ್ಣವಾಗಿ ಲಸಿಕೆ ಪಡೆದಿರಬೇಕು. ಶಾಲೆಗೆ ಹೋಗುವ ಮಕ್ಕಳ ಪೋಷಕರು ಕೂಡಾ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ" ಎಂದು ತಿಳಿಸಿದ್ದಾರೆ.
"ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಸನ ವ್ಯವಸ್ಥೆ ಹಾಗೂ ಪ್ರಮಾಣಿಕ ಕಾರ್ಯಾಚರಣಾ ವಿಧಾನವನ್ನು ಅನುಸರಿಸಬೇಕು ಎಂದು ಸರ್ಕಾರ ತಿಳಿಸಿದೆ" ಎಂದಿದ್ದಾರೆ.
"ಮಕ್ಕಳನ್ನು ಶಾಲೆಗೆ ಕಳುಹಿಸುವ ಮುನ್ನ ಲಸಿಕೆ ಹಾಕಿರಬೇಕು ಎನ್ನುವುದಕ್ಕೆ ಸಂಬಂಧಪಟ್ಟಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಯಾವುದೇ ಶಿಫಾರಸ್ಸು ಇಲ್ಲ. ಮಕ್ಕಳಿಗೆ ನೀಡುವಂತ ಲಸಿಕೆಯ ಅಭಿವೃದ್ಧಿಗಾಗಿ ದೇಶ ಸಕ್ರಿಯವಾಗಿ ಕೆಲಸ ಮಾಡುತ್ತಿದೆ" ಎಂದು ಹೇಳಿದ್ದಾರೆ.