ಬೆಂಗಳೂರು, ಸೆ. 09 (DaijiworldNews/SM): ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್ ಶೀಟ್ ಗೆ ಸಂಬಂಧಿಸಿದಂತೆ ನಟಿ ಹಾಗೂ ನಿರೂಪಕಿ ಅನುಶ್ರೀ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ವಿರುದ್ದ ಕಿಶೋರ್ ಅಮಾನ್ ಶೆಟ್ಟಿ ಮಾಡಿರುವ ಆರೋಪಗಳು ಸುಳ್ಳು ಎಂದಿದ್ದಾರೆ.
ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ವಿಚಾರಣೆ ವೇಳೆ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ಡ್ರಗ್ ಸೇವನೆ, ಖರೀದಿ ಬಗ್ಗೆ ಸಿಸಿಬಿ ನನ್ನ ವಿಚಾರಣೆ ನಡೆಸಿಲ್ಲ ಎಂದಿದ್ದಾರೆ.
ಇನ್ನು 4 ಕೋಟಿ ರೂ. ಮನೆಯ ಬಗ್ಗೆಯೂ ಅನುಶ್ರೀ ಸ್ಪಷ್ಟನೆ ನೀಡಿದ್ದು, ನೀವೇ ಈ ಬಗ್ಗೆ ಮನೆಯ ಮಾಲಕರಲ್ಲಿ ವಿಚಾರಿಸಿಕೊಳ್ಳಿ. ಮಂಗಳೂರಿನಲ್ಲಿರುವ ಮನೆಗೆ ಬ್ಯಾಂಕ್ ಲೋನ್ ಇದ್ದು ಅದರ ಕೆಲಸವೂ ಕೂಡ ಸಂಪೂರ್ಣವಾಗಿಲ್ಲ. ನಾನು ಏಕಾಂಗಿಯಾಗಿ ಬೆಂಗಳೂರಿಗೆ ಬಂದು ಸಾಧನೆ ಮಾಡಿದ್ದೇನೆ. ಏಕಾಂಗಿಯಾಗಿ ಹೋರಾಡುತ್ತೇನೆ. ನನಗೆ ಯಾರೇ ಪ್ರಭಾವಿಗಳ ಸಹಾಯ ಬೇಕಿಲ್ಲ ಎಂದಿದ್ದಾರೆ. ಕಿಶೋರ್, 13 ವರ್ಷಗಳ ಹಿಂದಿನ ಕಾರ್ಯಕ್ರಮದ ಕೊರಿಯೋಗ್ರಾಫರ್ ಆಗಿದ್ದರು. ಆ ಸಂದರ್ಭದಲ್ಲಿ ನಾನು ಡ್ಯಾನ್ಸ್ ರಿಯಾಲಿಟಿ ಶೋ ಗೆದ್ದಿದ್ದೆ. ಕಿಶೋರ್ ನನಗೆ ಡ್ಯಾನ್ಸ್ ಕೊರಿಯೋಗ್ರಾಫರ್, ಗುರುಗಳು ಎಂದಿದ್ದಾರೆ. ಇನ್ನು ಇತ್ತೀಚಿಗೆ ಮಂಗಳೂರಿನಲ್ಲಿ ಡ್ಯಾನ್ಸ್ ಕ್ಲಾಸ್ ಆರಂಭಿಸಿದ್ದರು. ಅದರ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದರು. ನಾನು ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ್ದೆ ಎಂದು ಅನುಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.