ನವದೆಹಲಿ, ಸೆ. 09 (DaijiworldNews/SM): ಕೇಂದ್ರ ಸರಕಾರ ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ ಸಿಹಿ ನೀಡಿದೆ. 9,871 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸುವ ಮೂಲಕ ರಾಜ್ಯಗಳಿಗೆ ಕೇಂದ್ರ ನೆರವಾಗಿದೆ. ವಿತರಣಾ ಆದಾಯ ಕೊರತೆಯ(ಪಿಡಿಆರ್ಡಿ) ಅನುದಾನದ ಆರನೇ ಮಾಸಿಕ ಕಂತನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಸಂವಿಧಾನದ ಪರಿಚ್ಛೇದ 275ರ ಅಡಿಯಲ್ಲಿ ಈ ಅನುದಾನವನ್ನು ರಾಜ್ಯಗಳಿಗೆ ಒದಗಿಸಲಾಗಿದೆ. ಇದರಿಂದಾಗಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಪಿಡಿಆರ್ಡಿ ಅನುದಾನವಾಗಿ ಅರ್ಹ ರಾಜ್ಯಗಳಿಗೆ ಒಟ್ಟು 59,226 ಕೋಟಿ ರೂಪಾಯಿಗಳನ್ನು ನೀಡಿದೆ.
2021-22ರ ಅವಧಿಯಲ್ಲಿ 17 ರಾಜ್ಯಗಳ ಕಂದಾಯ ಖಾತೆಗಳಲ್ಲಿನ ಅಂತರವನ್ನು ಪೂರೈಸಲು ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಮಾಸಿಕ ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಅನುದಾನ ಬಿಡುಗಡೆಗೊಳಿಸಿದ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಪಶ್ಚಿಮ ಬಂಗಾಳ ಮತ್ತು ಮೇಘಾಲಯ ಒಳಗೊಂಡಿದೆ.