ಶ್ರೀನಗರ, ಸ.09 (DaijiworldNews/HR): ತಾಲಿಬಾನ್ ಕುರಿತಾಗಿ ನಾನು ಹೇಳಿರುವ ಹೇಳಿಕೆಯನ್ನ ಉದ್ದೇಶಪೂರ್ಕವಾಗಿಯೇ ತಿರುಚಲಾಗಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, "ನಿಜವಾದ ಇಸ್ಲಾಮಿಕ್ ಷರಿಯಾವನ್ನು ಜಾರಿಗೆ ತಂದರೆ, ಜಗತ್ತಿಗೆ ತಾಲಿಬಾನ್ ಮಾದರಿಯಾಗಲಿದೆ ಎಂದು ಹೇಳಿದ್ದರು. ತಮ್ಮ ಈ ಹೇಳಿಕೆಯನ್ನು ತಿರುಚಲಾಗಿದೆ" ಎಂದು ಹೇಳಿದ್ದಾರೆ.
ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, "ಷರಿಯಾ ಕುರಿತ ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದರ ಬಗ್ಗೆ ನನಗೆ ಆಶ್ಚರ್ಯವಿಲ್ಲ. ಷರಿಯಾವನ್ನು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ಹೆಚ್ಚಿನ ದೇಶಗಳು ಅದರ ನೈಜ ಮೌಲ್ಯಗಳನ್ನು ಗ್ರಹಿಸುವಲ್ಲಿ ವಿಫಲವಾಗಿವೆ. ಮಹಿಳೆಯರ ಮೇಲೆ ನಿರ್ಬಂಧ ಹೇರಲಷ್ಟೇ ಅದನ್ನು ಅಡ್ಡ ತರಲಾಗುತ್ತಿದೆ" ಎಂದಿದ್ದಾರೆ.
ಇನ್ನು "ನಿಜವಾದ ಮದೀನಾ ಕಾನೂನು ಪುರುಷರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಮಹಿಳೆಯರಿಗೆ ಆಸ್ತಿ, ಸಾಮಾಜಿಕ, ಕಾನೂನು ಮತ್ತು ವಿವಾಹ ಹಕ್ಕುಗಳನ್ನು ನೀಡಲಾಗಿದೆ" ಎಂದು ಹೇಳಿದ್ದಾರೆ.