ರಾಜಸ್ತಾನ, ಸೆ 09 (DaijiworldNews/MS): ಸುಖೋಯ್ Su-30 MKI ಫೈಟರ್ ಜೆಟ್ ಸೇರಿದಂತೆ ಭಾರತದ ವಾಯು ಪಡೆಯ ವಿಮಾನಗಳು ಮೊಟ್ಟ ಮೊದಲ ಬಾರಿಗೆ ರಾಜಸ್ಥಾನದ ಜಲೋರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊದಲ ಬಾರಿಗೆ ಲ್ಯಾಂಡಿಂಗ್ ಆಗಿದೆ.
ರಾಷ್ಟ್ರೀಯ ಹೆದ್ದಾರಿ 925 'ಎ' ಯ ಭಾರತೀಯ ವಾಯುಪಡೆಗಾಗಿ ನಿರ್ಮಿಸಲಾಗಿರುವ ತುರ್ತು ಭೂಸ್ಪರ್ಶ ನೆಲೆ(ಇಎಲ್ಎಫ್)ಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದು ಇದು ವಾಯುಪಡೆ ವಿಮಾನಗಳ ಭೂ ಸ್ಪರ್ಶಕ್ಕಾಗಿ ಬಳಸುತ್ತಿರುವ ಭಾರತದ ಮೊದಲ ರಾಷ್ಟ್ರೀಯ ಹೆದ್ದಾರಿಯಾಗಿದೆ.
ಬರ್ಮಾರ್ ನ ಗಾಂಧವ್ ಭಕಾಸರ್ ವಿಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ನೆಲೆ ನಿರ್ಮಿಸಲಾಗಿದ್ದು ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ, ಬಿಪಿನ್ ರಾವತ್ ಅವರನ್ನು ಹೊತ್ತ ಭಾರತೀಯ ವಾಯುಪಡೆಯ ಎ ಹರ್ಕ್ಯುಲಸ್ ಸಿ-130ಜೆ ವಿಮಾನ ಗುರುವಾರ ಈ ಹೆದ್ದಾರಿಯಲ್ಲಿ ಅಣುಕು ತುರ್ತು ಭೂಸ್ಪರ್ಶ ಮಾಡಿತು.
ಸುಖೋಯ್ ಅಲ್ಲದೆ ಎಎನ್-32 ಮಿಲಿಟರಿ ಸಾರಿಗೆ ವಿಮಾನ ಮತ್ತು ಐಎಎಫ್ ನ ಎಂಐ-17v5 ಹೆಲಿಕಾಪ್ಟರ್ ಸಹ ಇಎಲ್ಎಫ್ ನಲ್ಲಿ ಇಳಿಯಿತು. ಇದು ಸಹಾಯಕ ಮಿಲಿಟರಿ ವಾಯುನೆಲೆಯಾಗಿ ಕಾರ್ಯನಿರ್ವಹಿಸಲು ತನ್ನ ಸಂಪೂರ್ಣ ಕಾರ್ಯಾಚರಣೆಯ ಸಿದ್ಧತೆಯನ್ನು ತೋರಿಸುತ್ತದೆ.
ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ ರಾಷ್ಟ್ರೀಯ ಹೆದ್ದಾರಿ 925ರ ಸತ್ತಾ-ಗಾಂಧವ್ ಸ್ಟ್ರೆಚ್ ನಲ್ಲಿ 3 ಕಿ.ಮೀ ರಸ್ತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದೆ.
ಎಮರ್ಜೆನ್ಸಿ ಲ್ಯಾಂಡಿಂಗ್ ಫೀಲ್ಡ್ ಹಾಗೂ ಮೂರು ಹೆಲಿಪ್ಯಾಡ್ಗಳು ಯುದ್ಧದ ಸಮಯದಲ್ಲಿ ಮಾತ್ರವಲ್ಲದೆ ಯಾವುದೇ ನೈಸರ್ಗಿಕ ವಿಕೋಪದ ಸಮಯದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಉಪಯುಕ್ತವಾಗಲಿದೆ.