ಕೋಯಿಕ್ಕೋಡ್,ಸ.09 (DaijiworldNews/HR): ನಿಫಾ ಸೋಂಕಿಗೆ ಬಲಿಯಾದ 12 ವರ್ಷದ ಬಾಲಕನೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿದ್ದ 61 ಜನರ ಪರೀಕ್ಷಾ ವರದಿಯ ಫಲಿತಾಂಶಗಳು ಈವರೆಗೆ ನೆಗೆಟಿವ್ ಬಂದಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಬುಧವಾರ 46 ಮಂದಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವೆಲ್ಲವೂ ನೆಗಟಿವ್ ಬಂದಿದ್ದವು. ನಂತರ ಕಳುಹಿಸಿದ್ದ 15 ಜನರ ಮಾದರಿಯೂ ನೆಗೆಟಿವ್ ದೃಢಪಟ್ಟಿದೆ" ಎಂದಿದ್ದಾರೆ.
ಇನ್ನು "ಮತ್ತಷ್ಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಪ್ರಸ್ತುತ 64 ಮಂದಿಯನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದ್ದು, ಅವರೆಲ್ಲರ ಆರೋಗ್ಯ ಸ್ಥಿರವಾಗಿದೆ" ಎಂದು ಹೇಳಿದ್ದಾರೆ.
ಮಾರಣಾಂತಿಕ ವೈರಸ್ ನಿಫಾ ಹರಡುವುದನ್ನು ತಡೆಗಟ್ಟಲು ಮತ್ತು ಸೋಂಕಿತರ ಪತ್ತೆ ಹಚ್ಚುವಿಕೆ, ಕಟ್ಟೆಚ್ಚರ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.