ಬೆಂಗಳೂರು, ಸ.09 (DaijiworldNews/HR): ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಅನಿವಾರ್ಯವಾಗಿರುವುದರಿಂದ ಬಿಜೆಪಿ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಿದ್ದೇವೆ ಎಂದು ಇಂಧನ ಸಚಿವ ಸುನಿಲ್ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬೆಂಗಳೂರಿನಲ್ಲಿ 136 ಕಡೆ ವಿದ್ಯುತ್ ರೀ ಚಾರ್ಜಿಂಗ್ ಸೆಂಟರ್ ಆರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ಸೆಂಟರ್ ನಿರ್ಮಾಣವಾಗಲಿದೆ" ಎಂದರು.
ಇನ್ನು "ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ಇದು ಅನಿವಾರ್ಯವಾಗಲಿದೆ. ಹೀಗಾಗಿ ರೀ ಚಾರ್ಜಿಂಗ್ ಸೆಂಟರ್ ಸ್ಥಾಪಿಸಲು ಹೆಚ್ಚು ಒತ್ತು ನೀಡಲಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ" ಎಂದು ಹೇಳಿದ್ದಾರೆ.