ಬೆಂಗಳೂರು, ಸೆ 09 (DaijiworldNews/MS): ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸಂಪುಟ ಸ್ಥಾನಕ್ಕೆ ಸೇರ್ಪಡೆಗೊಳಿಸಲು ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ಹೇಳಿವೆ. ಇದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇದೇ ಕಾರಣದಿಂದ ಸೆಪ್ಟೆಂಬರ್ 8 ಬುಧವಾರ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಎರಡು ಬಾರಿ ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ಹೇಳಲಾಗಿದೆ.
ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಖಾಲಿ ಹುದ್ದೆಗಳನ್ನು ವಿಜಯೇಂದ್ರ ಮತ್ತು ಇತರ ಮೂವರನ್ನು ಒಳಗೊಂಡಂತೆ ತುಂಬಲು ಸಿಎಂ ಒತ್ತಡದಲ್ಲಿದ್ದಾರೆ. ಯಡಿಯೂರಪ್ಪ ಅವರೇ ತಮ್ಮ ಮಗನನ್ನು ಮಂತ್ರಿ ಮಾಡುವ ಲಾಭಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ರಾಷ್ಟ್ರೀಯ ನಾಯಕರು ಈಗ ಕ್ಯಾಬಿನೆಟ್ ವಿಸ್ತರಣೆಗೆ ಅನುಮತಿ ನೀಡಲು ಸಿದ್ಧರಿಲ್ಲ ಮತ್ತು ಈ ಕಾರಣದಿಂದಾಗಿ, ಸಿಎಂಗೆ ಕಳೆದ ಬಾರಿಯ ದೆಹಲಿ ಭೇಟಿಯ ಸಮಯದಲ್ಲಿ ನಡ್ಡಾ ಅವರನ್ನು ಭೇಟಿಯಾಗಲು ಸಮಯ ನೀಡಲಿಲ್ಲ ಎನ್ನಲಾಗಿದೆ.
ಕಳೆದ ಬಾರಿ ಭೇಟಿಯಲ್ಲಿ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸುವ ಬಗ್ಗೆ ಬೊಮ್ಮಾಯಿ ಅಮಿತ್ ಶಾ ಜೊತೆ ಪ್ರಸ್ತಾಪಿಸಿದಾಗ, ಈ ವಿಷಯವನ್ನು ನಡ್ಡಾ ಜೊತೆ ಚರ್ಚಿಸಲು ಅವರು ತಿಳಿಸಿದ್ದರು ಎನ್ನಲಾಗಿದೆ.