ಜೋರ್ಹತ್, (DaijiworldNews/MS): ಎರಡು ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಸುಮಾರು 35ಕ್ಕೂ ಹೆಚ್ಚು ಮಂದಿ ನಾಪತ್ತೆಯಾದ ಘಟನೆ ಅಸ್ಸಾಂನ ಜೋರ್ಹತ್ ಜಿಲ್ಲೆಯ ನಿಮತಿ ಘಾಟ್ ಬಳಿ ನಡೆದಿದೆ.
ಬುಧವಾರ 3.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಮಾ ಕಮಲ ದೋಣಿ ನಿಮಾತಿ ಘಾಟ್ ನಿಂದ ಮಜುಲಿಗೆ ಸಂಚರಿಸುತ್ತಿದ್ದಾಗ ಮಜುಲಿಯಿಂದ ವಾಪಸ್ಸಾಗುತ್ತಿದ್ದ ಸರ್ಕಾರಿ ಸ್ವಾಮ್ಯದ ಟ್ರಿಪ್ಕೈಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಲ್ಲಿಯವರೆಗೆ ಕನಿಷ್ಠ 35 ಜನರನ್ನು ರಕ್ಷಿಸಲಾಗಿದೆ. ಇನ್ನು ಜೋರ್ಹತ್ ವೈದ್ಯಕೀಯ ಕಾಲೇಜಿನಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾರೆ. ಮೃತರನ್ನು 38 ವರ್ಷದ ಶಿಕ್ಷಕಿ ಪರೋಮಿತಾ ದಾಸ್ ಎಂದು ಗುರುತಿಸಲಾಗಿದೆ.
ಇಲ್ಲಿಯವರೆಗೆ ಒಬ್ಬ ವ್ಯಕ್ತಿಯ ಮೃತದೇಹವನ್ನು ಹೊರ ತೆಗೆಯಲಾಗಿದ್ದು, 42 ಜನರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ ಅಥವಾ ಸ್ಥಳೀಯರು ರಕ್ಷಿಸಿದ್ದಾರೆ. ರಕ್ಷಿಸಿದ ಪ್ರಯಾಣಿಕರಲ್ಲಿ ಏಳು ಮಕ್ಕಳು ಸೇರಿದ್ದಾರೆ. ರಕ್ಷಿಸಿದ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೋಣಿ ಯಲ್ಲಿ ಸುಮಾರು 75 ಜನರು ಇದ್ದರು ಮತ್ತು ಸುಮಾರು 35 ಜನರು ನಾಪತ್ತೆಯಾಗಿದ್ದಾರೆ. ಬಲವಾದ ನೀರಿನ ಪ್ರವಾಹದ ಕಾರಣ ಕಾರ್ಯಾಚರಣೆಗೆ ತೊಡಕು ಉಂಟಾಗಿತ್ತು . ಡಿಕ್ಕಿಯಾದ ನಂತರ, ಒಂದು ಮುಳುಗಿದೆ. ಎರಡನೇ ದೋಣಿ ಕೂಡ ಮುಳುಗುವ ಹಂತದಲ್ಲಿತ್ತು. ಆದರೆ ಪೊಲೀಸರು ಮತ್ತು ಸ್ಥಳೀಯರು ಅದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಜೋರ್ಹತ್ ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಜೈನ್ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.