ಬೆಂಗಳೂರು, ಸ. 08 (DaijiworldNews/HR): ಗಣೇಶ ಹಬ್ಬಕ್ಕೆ ಮೂರು ದಿನ ಬಾಕಿ ಇರುವಾಗ ರಾಜ್ಯ ಸರಕಾರವು ಮನೆಯಲ್ಲಿ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಗಣೇಶ ಮೂರ್ತಿ ಇಡಬೇಕೆಂದು ನಿರ್ಬಂಧ ಹೇರುವ ಮೂಲಕ ಮೂರ್ತಿ ತಯಾರಕರ ಬದುಕಿನ ಜತೆ ಚೆಲ್ಲಾಟವಾಡಿದೆ. ತಕ್ಷಣ ಈ ಆದೇಶ ಹಿಂಪಡೆಯಬೇಕು ಅಥವಾ ಮೂರ್ತಿ ತಯಾರಿಕರಿಗೆ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕಳೆದ 2 ತಿಂಗಳಿಂದ ಗಣೇಶ ಮೂರ್ತಿ ತಯಾರಕರು ಲಕ್ಷಾಂತರ ಮೂರ್ತಿಗಳನ್ನು ಮಾಡಿರುತ್ತಾರೆ. ಸರ್ಕಾರ ಕೊನೆ ಕ್ಷಣದಲ್ಲಿ ಇಂತಹ ನಿರ್ಬಂಧ ಹೇರಿದರೆ ಅವರ ಸ್ಥಿತಿ ಏನಾಗಬೇಕು? ಸರ್ಕಾರ ಇದನ್ನೇ ಎರಡು-ಮೂರು ತಿಂಗಳ ಹಿಂದೆಯೇ ಹೇಳಿದ್ದರೆ ಮೂರ್ತಿ ತಯಾರಕರು ದೊಡ್ಡ ಮೂರ್ತಿಗಳನ್ನು ಮಾಡುತ್ತಲೇ ಇರಲಿಲ್ಲ" ಎಂದರು
ಇನ್ನು ಕೊರೊನಾ ಸಮಯದಲ್ಲಿ ಆದಾಯವಿಲ್ಲದಿದ್ದ ಗಣೇಶ ಮೂರ್ತಿ ತಯಾರಕರು, ತಮ್ಮ ಬಳಿ ಇದ್ದಬದ್ದ ಹಣ ಹಾಕಿ ಮೂರ್ತಿಗಳನ್ನು ತಯಾರಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಈ ನಿರ್ಬಂಧ ಹೇರಿದರೆ ಅವರು ಎಲ್ಲಿಗೆ ಹೋಗಬೇಕು? ಈ ರೀತಿ ನಿರ್ಬಂಧ ಎಷ್ಟು ಸರಿ? ದೇವರ ಮೂರ್ತಿ ಮಾಡಿಕೊಂಡು ಜೀವನ ನಡೆಸುವವರ ಬದುಕಿಗೆ ಸರಕಾರ ಕೊಳ್ಳಿ ಇಟ್ಟಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.