ನವದೆಹಲಿ, ಸೆ. 08 (DaijiworldNews/PY): "ಜಾತ್ಯಾತೀತತೆಯ ಹೆಸರಿನಲ್ಲಿ ಮುಸ್ಲಿಮರಿಗೆ ವಂಚಿಸಲಾಗಿದೆ" ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ದೂರಿದ್ದಾರೆ.
ಓವೈಸಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ಮುಸ್ಲಿಂ ಬಾಹುಳ್ಯದ ರುಡೌಲಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಮುಂದಿನ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ 100 ಕ್ಷೇತ್ರಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು" ಎಂದಿದ್ದಾರೆ.
"ಯಾರ ನೆರಳಿನಲ್ಲಿಯೂ ಮುಸ್ಲಿಂಮರು ಬದುಕಬೇಕಾಗಿಲ್ಲ. ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ಯಾವಾಗಲೂ ಮುಸ್ಲಿಂ ಸಮುದಾಯವನ್ನು ಭಯದಲ್ಲೇ ಇರಿಸಿರುವುದಾಗಿ ಆರೋಪಿಸಿದ್ದಾರೆ" ಎಂದು ವರದಿ ಹೇಳಿದೆ.
"ಯಾದವರು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಿಲ್ಲ. ರಾಜ್ಯದಲ್ಲಿ ಯಾದವರ ಸಹಯೋಗದೊಂದಿಗೆ ಸಮಾಜವಾದಿ ಪಕ್ಷ ಗೆಲುವು ಸಾಧಿಸುತ್ತಿದೆ" ಎಂದಿದ್ದಾರೆ.
"ಕೊರೊನಾದ ಕಾರಣದಿಂದ ದೇಶದಲ್ಲಿ ಸಾವಿರಾರು ಮಂದಿ ಆಕ್ಸಿಜನ್ ಇಲ್ಲದೇ ಸಾವಪ್ಪುವಂತಾಗಿದ್ದು, ನದಿ ದಡದಲ್ಲಿ ಶವಗಳನ್ನು ಎಸೆಯಲಾಗಿತ್ತು. ನಾಯಿಗಳು ಅದನ್ನು ತಿನ್ನುವ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಕಾರಣಕ್ಕಾಗಿ ಬಿಜೆಪಿಯನ್ನು ಸೋಲಿಸುವ ನಿಟ್ಟನಲ್ಲಿ ನಾವು ಉತ್ತರಪ್ರದೇಶದಲ್ಲಿ ಸ್ಪರ್ಧಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.