ನವದೆಹಲಿ, ಸೆ. 08 (DaijiworldNews/PY): "ಕೊರೊನಾದ ಎರಡನೇ ಅಲೆಯ ಸಂದರ್ಭದಲ್ಲಿ ಸಂಭವಿಸಿದ ಎಲ್ಲಾ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ನ್ಯಾಯಾಲಯಗಳು ಊಹಿಸಲು ಸಾಧ್ಯವಿಲ್ಲ" ಎಂದು ಬುಧವಾರ ಸುಪ್ರೀಂ ಕೋರ್ಟ್ ತಿಳಿಸಿದೆ.
ವೈದ್ಯಕೀಯ ನಿರ್ಲಕ್ಷ್ಯದಿಂದ ಕೊರೊನಾ ಸೋಂಕಿತರ ಮೃತಪಟ್ಟಿದ್ದು, ಇದಕ್ಕೆ ಪರಿಹಾರ ನೀಡಬೇಕು ಎಂದು ಕೋರಿ ದೀಪಕ್ ರಾಜ್ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಯ್ಲಿ ಅವರನ್ನೊಳಗೊಂಡ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದ್ದು, "ಈ ಬಗ್ಗೆ ನೀವು ಹೆಚ್ಚಿನ ಸಲಹೆಗಳಿಗಾಗಿ ಸಮರ್ಥ ಅಧಿಕಾರಿಗಳನ್ನು ಸಂಪರ್ಕಿಸಬಹುದು" ಎಂದು ಹೇಳಿದೆ.
"ಕೊರೊನಾದಿಂದ ಸಂಭವಿಸಿರುವ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎನ್ನುವುದು ಅತಿರೇಕ ಎನ್ನಿಸುತ್ತದೆ. ಕೊರೊನಾದ ಎರಡನೇ ಅಲೆ ದೇಶದಾದ್ಯಂತ ಪ್ರಭಾವ ಬೀರಿತು. ಹಾಗೆಂದ್ರ ಮಾತ್ರಕ್ಕೆ ಎಲ್ಲಾ ಸಾವುಗಳು ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎಂದು ಅಂದಾಜಿಸಲು ಸಾಧ್ಯವಿಲ್ಲ" ಎಂದು ನ್ಯಾಯಪೀಠ ತಿಳಿಸಿದೆ.
"ಈ ವಿಚಾರವಾಗಿ ಸರ್ಕಾರ ಇನ್ನು ನೀತಿಯನ್ನು ರೂಪಿಸಬೇಕಾಗಿದೆ. ನೀತಿಯ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ನಿಮ್ಮಲ್ಲಿ ಯಾವುದೇ ಸಲಹೆಗಳಿದ್ದಲ್ಲಿ, ನೀವು ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸಬಹುದು" ಎಂದು ನ್ಯಾಯಪೀಠ ಅರ್ಜಿದಾರರಿಗೆ ಹೇಳಿದೆ.