ಬೆಂಗಳೂರು, ಸ. 08 (DaijiworldNews/HR): ಸೆಪ್ಟಂಬರ್ 13 ರಿಂದ24 ರವರೆಗೆ ಈ ಬಾರಿಯ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗುತ್ತಿದೆ. ಕಲಾಪ ವೀಕ್ಷಿಸಲು ಸಾರ್ವಜನಿಕರಿಗೆ ಅನುಮತಿ ನೀಡಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಸೆಪ್ಟಂಬರ್ 13 ರಿಂದ24 ರವರೆಗೆ ಈ ಬಾರಿ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಎಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು. ಈ ಹತ್ತನೇ ಅಧಿವೇಶನವನ್ನು ಗಂಭೀರವಾಗಿ ನಡೆಸಲು ನಿರ್ಧರಿಸಿದ್ದು, ಯಾರೂ ಗೈರಾಗಬಾರದು. ಮಂತ್ರಿಗಳು ಯಾವುದೋ ನೆಪವೊಡ್ಡಿ ರಜೆ ಕೇಳಬೇಡಿ. ಅಗತ್ಯವಿದ್ದಲ್ಲಿ ಸಹಕಾರ ನೀಡಲಾಗುವುದು" ಎಂದು ತಿಳಿಸಿದರು.
ಇನ್ನು "ಸೆ.24ರ ಅಧಿವೇಶನದ ಕೊನೆಯ ದಿನ ಕೇಂದ್ರದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬಂದು ಸಂಸದೀಯ ಮೌಲ್ಯಗಳ ಕುರಿತು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದು, ಕೊರೊನಾ ಮಾರ್ಗಸೂಚಿಗಳ ಪ್ರಕಾರವೇ ಅಧಿವೇಶನ ನಡೆಯಲಿದೆ" ಎಂದರು.
"ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿದ್ದು, ಈ ಪ್ರಶಸ್ತಿಗೆ ಒಬ್ಬ ಶಾಸಕರನ್ನ ಗುರುತಿಸಲು ಕಮಿಟಿ ರಚನೆ ಮಾಡಿದ್ದೇವೆ. ಮುಖ್ಯಮಂತ್ರಿ ಹಾಗೂ ವಿಪಕ್ಷದವರು ಎಲ್ಲರೂ ಈ ಕಮಿಟಿಯಲ್ಲಿ ಇರಲಿದ್ದು, ಈ ಬಾರಿ ಅಧಿವೇಶನವನ್ನು ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶ ನೀಡಲಾಗುವುದು" ಎಂದಿದ್ದಾರೆ.