ನವದೆಹಲಿ, ಸೆ 8 (DaijiworldNews/MS): ಮೂರು ರಕ್ಷಣಾ ಪಡೆಗಳಲ್ಲಿಯೂ ಮಹಿಳೆಯರಿಗೆ ಶಾಶ್ವತ ಆಯೋಗ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರಕಾರವು ಬುಧವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಬುಧವಾರ ಸುಪ್ರೀಂ ಕೋರ್ಟ್ʼಗೆ " ಮಹಿಳೆಯರಿಗೆ ಶಾಶ್ವತ ಆಯೋಗವನ್ನ ನೀಡಲು ಮೂರು ಸೇವಾ ಮುಖ್ಯಸ್ಥರು ಮತ್ತು ಸರ್ಕಾರ ನಿರ್ಧರಿಸಿದೆ. ಮಂಗಳವಾರ ಸಂಜೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಸರಕಾರವು ಮಹಿಳೆಯರಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ಡಿಎ) ಕೋರ್ಸ್ಗಳನ್ನು ತೆಗೆದುಕೊಳ್ಳಲು ದಾರಿ ಮಾಡಿಕೊಡಲು ಮಾರ್ಗಸೂಚಿಗಳನ್ನು ರೂಪಿಸಲು ಸ್ವಲ್ಪ ಸಮಯ ಬೇಕಾಗುತ್ತದೆ " ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರು, 'ಲಿಂಗ ಸಮಾನತೆಯ ಬಗ್ಗೆ, ಸಶಸ್ತ್ರ ಪಡೆಗಳು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಮಹಿಳೆಯರನ್ನು ಎನ್ಡಿಎಗೆ ಸೇರಿಸುವ ನಿರ್ಧಾರವನ್ನು ಸಶಸ್ತ್ರ ಪಡೆಗಳು ಸ್ವತಃ ತೆಗೆದುಕೊಂಡವು ಎಂದು ತಿಳಿದು ನಮಗೆ ತುಂಬಾ ಸಂತೋಷವಾಗಿದೆ. ಸುಧಾರಣೆಗಳು ಒಂದೇ ದಿನದಲ್ಲಿ ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ' ಎಂದು ಹೇಳಿದ್ದಾರೆ