ಹೈದರಾಬಾದ್, ಸೆ. 08 (DaijiworldNews/PY): ಡ್ರಗ್ಸ್ ಪ್ರಕರಣದಲ್ಲಿನ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬುಧವಾರ ಜಾರಿ ನಿರ್ದೇಶನಾಲಯದ ಎದುರು ತೆಲುಗು ನಟ ರಾಣಾ ದಗ್ಗುಬಾಟಿ ಹಾಜರಾದರು.
ನಟರು ಹಾಗೂ ನಿರ್ದೇಶಕರು ಸೇರಿದಂತೆ 10 ಮಂದಿಗೆ ಇ.ಡಿ ಸಮನ್ಸ್ ಜಾರಿ ಮಾಡಿದೆ.
ಖ್ಯಾತ ಚಲನಚಿತ್ರ ನಿರ್ಮಾಪಕ ಪುರಿ ಜಗನ್ನಾಥ್, ನಟಿಯರಾದ ಚಾರ್ಮಿ ಕೌರ್, ರಕುಲ್ ಪ್ರೀತ್ ಸಿಂಗ್ ಹಾಗೂ ನಟ ನಂದು ಅವರು ಆಗಸ್ಟ್ 31ರಂದು ಇ.ಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
2017ರ ಜುಲೈ 2ರಂದು ಡ್ರಗ್ಸ್ ಜಾಲವೊಂದನ್ನು ತೆಲಂಗಾಣದ ಅಬಕಾರಿ ಇಲಾಖೆ ಭೇದಿಸಿದ್ದು, ಈ ಸಂದರ್ಭ ಎಲ್ಎಸ್ಡಿ ಹಾಗೂ ಎಂಡಿಎಂಎಗಳಂತಹ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಸಂಗೀತಗಾರ ಕ್ವಾಲ್ವಿನ್ ಮ್ಯಾಸ್ಕ್ರೇನ್ಹಸ್ ಸೇರಿ ಮೂವರು ಸದಸ್ಯರ ಗ್ಯಾಂಗ್ ಅನ್ನು ಅಧಿಕಾರಿಗಳು ಬಂಧಿಸಿದ್ದರು.
ಮಾದಕವಸ್ತುಗಳ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದು, ಇಲ್ಲಿಯವರೆಗೆ 20ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಎಂಎನ್ಸಿ, ಐ.ಟಿ ಸಂಸ್ಥೆಗಳ ಉದ್ಯೋಗಿಗಳು ಹಾಗೂ ಟಾಲಿವುಡ್ಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಈ ಗ್ಯಾಂಗ್ ಡ್ರಗ್ಸ್ ಸರಬರಾಜು ಮಾಡುತ್ತಿತ್ತು.
"ಕೆಲವೊಂದು ತೆಲುಗು ನಟ-ನಟಿಯರ ಹೆಸರು ವಿಚಾರಣೆಯ ಸಂದರ್ಭ ತಿಳಿದು ಬಂದಿದ್ದವು" ಎಂದು ಅಧಿಕಾರಿಗಳು ಹೇಳಿದ್ದಾರೆ.