ಕೋಯಿಕ್ಕೋಡ್, ಸೆ 8 (DaijiworldNews/MS): ನಿಫಾ ಸೋಂಕಿಗೆ ಬಲಿಯಾದ 12 ವರ್ಷದ ಬಾಲಕನೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿದ್ದ 30 ಜನರ ಪರೀಕ್ಷಾ ವರದಿಯ ಫಲಿತಾಂಶಗಳು ಈವರೆಗೆ ನೆಗೆಟಿವ್ ಬಂದಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ತಿಳಿಸಿದ್ದಾರೆ.
ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ವಿಚಾರ ಸ್ಪಷ್ಟಪಡಿಸಿದ್ದು, " ಇಂದು ಬೆಳಿಗ್ಗೆ 20 ಜನರ ಪರೀಕ್ಷಾ ವರದಿ ನೆಗೆಟಿವ್ ಎಂದು ದೃಢಪಟ್ಟಿದೆ. ಈಗಾಗಲೇ ನೆಗೆಟಿವ್ ಎಂದು ಸ್ಪಷ್ಟವಾಗಿರುವ ಒಟ್ಟು ಜನರ ಸಂಖ್ಯೆ 30. ಮಂಗಳವಾರದಂದು 10 ಜನರ ವರದಿಯೂ ನೆಗೆಟಿವ್ ಬಂದಿತ್ತು. ಇದಲ್ಲದೆ ಇತರ 21 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಅದರ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. ಪ್ರಸ್ತುತ 68 ಜನರು ನಿಗಾ ವಹಿಸಲಾಗಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ" ಎಂದು ಹೇಳಿದರು.
ಭೋಪಾಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ತಂಡವು ನಿಫಾ ಸೋಂಕಿನ ಮೂಲ ಕಂಡುಹುಡುಕಲು ಬಾವಲಿಗಳು ಮತ್ತು ಇತರ ಪ್ರಾಣಿಗಳ ಮಾದರಿಗಳನ್ನು ಸಂಗ್ರಹಿಸಲು ಇಲ್ಲಿಗೆ ಬರುತ್ತಿದ್ದಾರೆ.
ಮಾರಣಾಂತಿಕ ವೈರಸ್ ನಿಫಾ ಹರಡುವುದನ್ನು ತಡೆಗಟ್ಟಲು ಮತ್ತು ಸೋಂಕಿತರ ಪತ್ತೆ ಹಚ್ಚುವಿಕೆ, ಕಟ್ಟೆಚ್ಚರ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.