ಬೆಂಗಳೂರು, ಸೆ 8 (DaijiworldNews/MS): " ಬಿಜೆಪಿ ನೇತೃತ್ವದ ಸರ್ಕಾರವೂ, ಭ್ರಷ್ಟಾಚಾರವನ್ನೇ ಹಾಸಿ ಹೊದ್ದಿರುವ ಸೋಂಕಿತ ಸರ್ಕಾರ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಗ್ಗೆ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, " ರಾಜ್ಯದಲ್ಲಿ ಹಲವು ಸೋಂಕುಗಳು ತಾಂಡವವಾಡುತ್ತಿವೆ, ಆದರೆ ಬಿಜೆಪಿಗೆ ಭ್ರಷ್ಟಾಚಾರದ ಸೋಂಕು ತಗುಲಿದೆ, ಈ ಸೋಂಕಿತ ಸರ್ಕಾರ ದಿಂದ ರಾಜ್ಯ ನಲುಗುತ್ತಿದೆ. ಭ್ರಷ್ಟಾಚಾರವನ್ನೇ ಹಾಸಿ ಹೊದ್ದಿರುವ ಬಿಜೆಪಿಯಿಂದ ರಾಜ್ಯದ ಅಭಿವೃದ್ಧಿ ಕನಸು ಮಾತ್ರ. ರೈತರ ಸಂಕಷ್ಟಕ್ಕೆ ನೆರವಿಗೆ ನಿಲ್ಲಬೇಕಾದ ಹೊತ್ತಿನಲ್ಲಿ ರೈತರ ಹೆಸರಲ್ಲಿ ಬಿಜೆಪಿ. ಲೂಟಿಗೆ ಇಳಿದಿದೆ" ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.
ಈ ಹಿಂದೆ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ವಿರುದ್ಧ ಅಧಿಕಾರಿಗಳಿಂದ ಹಫ್ತಾ ವಸೂಲಿಯ ಆರೋಪ ಬಂದಿತ್ತು. ಈಗ ಕೃಷಿ ಯಂತ್ರೋಪಕರಣ ಖರೀದಿಯ 210 ಕೋಟಿ ಕಿಕ್ ಬ್ಯಾಕ್ ಪಡೆದ ಬಗ್ಗೆ ಎಸಿಬಿಗೆ ದೂರು ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ರಾಜೀನಾಮೆ ಪಡೆದು ತನಿಖೆ ನಡೆಸುವರೇ? ಅಥವಾ ಭ್ರಷ್ಟಾಚಾರಕ್ಕೆ ತಮ್ಮ ಮೌನ ಸಮ್ಮತಿ ತೋರುವರೆ?ಎಂದು ಪ್ರಶ್ನಿಸಿದೆ.