ತಿರುವನಂತಪುರಂ, ಸೆ. 08 (DaijiworldNews/PY): ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಯಾಗುತ್ತಿದ್ದಂತೆ ಕೇರಳ ಸರ್ಕಾರವು ಕೆಲವು ನಿರ್ಬಂಧಗಳನ್ನು ಸಡಿಲಿಸಲು ಮುಂದಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಿರುವನಂತಪುರದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ರಾತ್ರಿ ಕರ್ಫ್ಯೂ ಹಾಗೂ ಭಾನುವಾರದ ನಿರ್ಬಂಧಗಳನ್ನು ಕೂಡಲೇ ಜಾರಿಗೆ ಬರುವಂತೆ ಸಡಿಲಗೊಳಿಸಲು ಸೂಚನೆ ನೀಡಿದ್ದಾರೆ.
"ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿರುವ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ ಜನರು ಸಹಕರಿಸಬೇಕು" ಎಂದು ಪಿಣರಾಯಿ ವಿಜಯನ್ ಅವರು ತಿಳಿಸಿದ್ದಾರೆ.
"ಎಲ್ಲಾ ವಿದ್ಯಾರ್ಥಿಗಳು, ತರಬೇತುದಾರರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು" ಎಂದು ಸೂಚಿಸಿದೆ.
ಮಂಗಳವಾರ ಜಿಲ್ಲೆಯಲ್ಲಿ 25,772 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು 42,53,298 ಪ್ರಕರಣಗಳು ದಾಖಲಾಗಿವೆ. ನಿನ್ನೆ ಕೊರೊನಾ ಸೋಂಕಿಗೆ 189 ಮಂದಿ ಮೃತಪಟ್ಟಿದ್ದು, ಈವರೆಗೆ ಒಟ್ಟು 21,820 ಮಂದಿ ಮೃತಪಟ್ಟಿದ್ದಾರೆ.
ಕೇರಳದಲ್ಲಿ ಕೊರೊನಾ ಸಾಂಕ್ರಾಮಿಕ ನಡುವೆ ನಿಫಾ ವೈರಸ್ ಆತಂಕ ಸೃಷ್ಟಿಸಿದ್ದು, ರೋಗ ನಿಯಂತ್ರಣ ಹಾಗೂ ಪತ್ತೆಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ನ ತಂಡವು ಕೇರಳದಲ್ಲಿದ್ದು, ಕೇರಳದ ಆರೋಗ್ಯ ಇಲಾಖೆಗೆ ಈ ತಂಡ ಅಗತ್ಯ ಸಹಾಯ ಮಾಡುತ್ತಿದೆ.