ಬೆಂಗಳೂರು, ಸೆ. 07 (DaijiworldNews/PY): "ರೈತರಿಗೆ ನೆರೆ ಪರಿಹಾರ ಎನ್ನುವುದು ಕೈಗೆ ಸಿಗದ ಮಾಯಾಜಿಂಕೆಯಾಗಿದೆ!. ಪರಿಹಾರವಿಲ್ಲದ ಹಳೆಯ ಸಮೀಕ್ಷೆಗಳು ಏನಾದವು ಎಂದು ಬಿಜೆಪಿ ಹೇಳಬೇಕು" ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ರೈತರಿಗೆ ನೆರೆ ಪರಿಹಾರ ಎನ್ನುವುದು ಕೈಗೆ ಸಿಗದ ಮಾಯಾಜಿಂಕೆಯಾಗಿದೆ! ಪ್ರತಿ ವರ್ಷದ ನೆರೆಯಲ್ಲೂ ಕೇಂದ್ರದಿಂದ ಅಧ್ಯಯನ ತಂಡ ಬರುತ್ತದೆಯೇ ಹೊರತು ಪರಿಹಾರ ಮಾತ್ರ ಬರುತ್ತಿಲ್ಲ! ಇದು ಡಬಲ್ ಇಂಜಿನ್ ಸರ್ಕಾರ ಎಂದು ಹೆಗ್ಗಳಿಕೆಯಿಂದ ಹೇಳುವವರ ಅಸಲಿ ದುರಾವಸ್ಥೆ. ಪರಿಹಾರವಿಲ್ಲದ ಹಳೆಯ ಸಮೀಕ್ಷೆಗಳು ಏನಾದವು ಎಂದು ಬಿಜೆಪಿ ಹೇಳಬೇಕು" ಎಂದಿದೆ.
"ಇಂತಹಾದ್ದೊಂದು ಸಂವೇದನಾರಹಿತ ಹೇಳಿಕೆ ಬಿಜೆಪಿ ಜನವಿರೋಧಿ ನೀತಿಗೆ ಮತ್ತೊಂದು ಸಾಕ್ಷಿ. ಬೆಲೆ ಏರಿಕೆಯಿಂದ ಜನ ಊಟ ಬಿಟ್ಟಿಲ್ಲ, ಪೂಜೆ ಬಿಟ್ಟಿಲ್ಲ ಎನ್ನುವ ತರ್ಕಹೀನ ಮಾತುಗಳನ್ನಾಡುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ಜನ ಊಟ ಬಿಡುವ ಹಂತಕ್ಕೆ ಕೊಂಡೊಯ್ಯುವುದೇ ಬಿಜೆಪಿಯ ಅಜೆಂಡಾ, ಹಾಗಾಗಿ ಉಚಿತ ಶವ ಸಂಸ್ಕಾರ ಭಾಗ್ಯ ನೀಡುತ್ತಿದೆ!" ಎಂದು ಹೇಳಿದೆ.
ನೆರೆ ಅಧ್ಯಯನಕ್ಕಾಗಿ ಸೋಮವಾರ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದು, "ಈ ರೀತಿಯಾದ ಸಮೀಕ್ಷೆಗಳಿಂದ ಯಾವುದೇ ಪ್ರಯೋಜನ ಇಲ್ಲ" ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.