ನವದೆಹಲಿ, ಸೆ 07 (DaijiworldNews/MS): 2019 ರ ನವೆಂಬರ್ ತಿಂಗಳಲ್ಲಿ ಹೈದರಾಬಾದ್ನಲ್ಲಿ ನಡೆದಿದ್ದ ಪಶುವೈದ್ಯೆ 'ದಿಶಾ' ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ್ದಕ್ಕಾಗಿ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಒಟ್ಟು 38 ಸೆಲೆಬ್ರಿಟಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಾಗಿದೆ.
ಈ 38 ಸೆಲೆಬ್ರಿಟಿಗಳು ಯುವತಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದರು. ಆದರೆ ಈ ಪೋಸ್ಟ್ ನಲ್ಲಿ ಅತ್ಯಾಚಾರ ಸಂತ್ರಸ್ತೆಯ ನೈಜ ಹೆಸರು ಉಲ್ಲೇಖಿಸಲಾಗಿದೆ ಎಂದು ಇದರ ವಿರುದ್ಧ ಈಗ ವಕೀಲರೊಬ್ಬರು ಕೇಸ್ ಹಾಕಿದ್ದಾರೆ.
ದೆಹಲಿ ಮೂಲದ ಗೌರವ್ ಗುಲಾಟಿ ಎಂಬ ವಕೀಲರು ದೆಹಲಿಯ ಸಬ್ಜಿ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, 'ದಿಶಾ ಅತ್ಯಾಚಾರ ಪ್ರಕರಣದಲ್ಲಿ, ಜವಾಬ್ದಾರಿಯುತ ನಾಗರಿಕರಾಗಿರಬೇಕಾದವರು ಸಂತ್ರಸ್ತೆಯ ನಿಜವಾದ ಹೆಸರು ಹಾಗೂ ಊರು ಬಹಿರಂಗಪಡಿಸಿದ್ದಾರೆ' ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಕುರಿತು ತೀಸ್ ಹಜಾರಿ ನ್ಯಾಯಾಲಯದಲ್ಲಿ ಅರ್ಜಿ ಕೂಡ ದಾಖಲಿಸಿದ್ದಾರೆ.
'ಅನುಪಮ್ ಖೇರ್, ಪರ್ಹಾನ್ ಅಕ್ತರ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಲ್ಮಾನ್ ಖಾನ್, ರವಿ ತೇಜ, ರಾಕುಲ್ ಪ್ರೀತ್ ಸಿಂಗ್, ಅಲ್ಲು ಸೀರಿಶ್, ಚಾರ್ಮಿ ಕೌರ್ ಸೇರಿದಂತೆ 38 ನಟ ನಟಿಯರು ತಮ್ಮ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸೋಶಿಯಲ್ ಮೀಡಿಯಾ ಖಾತೆಗಳ ಸಂತ್ರಸ್ತೆಯ ನಿಜವಾದ ಹೆಸರು ಬಹಿರಂಗಪಡಿಸಿ ಕಾನೂನು ಉಲ್ಲಂಘಿಸಿದ್ದಾರೆ' ಎಂದು ವಕೀಲ ಗುಲಾಟಿ ಆರೋಪಿಸಿದ್ದಾರೆ.ಸಜ್ಬಿ ಮಂಡಿ ಪೊಲೀಸ್ ರಾಣೆಯಲ್ಲಿ ಐಪಿಸಿ ಸೆಕ್ಷನ್ 228ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ
ನವೆಂಬರ್ 28, 2019 ರಂದು ಹೈದರಾಬಾದ್ನ ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಶುವೈದ್ಯೆಯೊಬ್ಬರನ್ನು ನಾಲ್ವರು ಕಾಮುಕರು ಅಪಹರಿಸಿ, ಅತ್ಯಾಚಾರ ಮಾಡಿ, ಸುಟ್ಟು ಹಾಕಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಎನ್ಕೌಂಟರ್ ಮಾಡಿದ್ದರು. ಈ ಪ್ರಕರಣ 'ದಿಶಾ ಅತ್ಯಾಚಾರ ಪ್ರಕರಣ' ಎಂದು ದೇಶಾದ್ಯಂತ ಸದ್ದು ಮಾಡಿತ್ತು.