ಬಾಗಲಕೋಟೆ, ಸೆ 07 (DaijiworldNews/MS): ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಗರ್ಭಿಣಿಯೊಬ್ಬರು ತುಂಗಭದ್ರಾ ನದಿ ನೀರಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಸಿಂಧನೂರು ತಾಲೂಕಿನ ದಢೇಸೂಗೂರು ಗ್ರಾಮದ ಬಳಿ ಸಂಭವಿಸಿದೆ.
ಮೃತರನ್ನು ಸಿರಗುಪ್ಪದ ಅಂಬಾನಗರ ನಿವಾಸಿ ಚೆನ್ನಮ್ಮ(35), ಮಕ್ಕಳಾದ ಸುಮಿತ್ರಾ(7) ಮತ್ತು ಪ್ರಶಾಂತ್(5) ಎಂದು ಗುರುತಿಸಲಾಗಿದೆ. ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿಂದ ಸೋಮವಾರ ಸಂಜೆ ಈ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆನ್ನಮ್ಮ ಅವರ ಪತಿ ರವಿ ಇತ್ತೀಚೆಗೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ಪತ್ನಿಗೆ ಗಂಡನ ಸಾವು ತೀವ್ರ ಆಘಾತ ನೀಡಿತ್ತು. ನೊಂದ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.