ನವದೆಹಲಿ, ಸೆ. 07 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಟ್ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆಗ್ರಹಿಸಿದ್ದು, "ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರ ಕುರುಡು ನಿರ್ಧಾರಕ್ಕೆ ಮುಂದಾಗಿದೆ" ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರ ಕುರುಡು ನಿರ್ಧಾರಕ್ಕೆ ಮುಂದಾಗಿದೆ. ನೀಟ್ ಪರೀಕ್ಷೆಗಳನ್ನು ಮುಂದೂಡಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನ್ಯಾಯಯುತ ಅವಕಾಶ ಕಲ್ಪಿಸಿಕೊಡಿ" ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸೆ.12ರಂದು ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಅರ್ಹತೆ ಹಾಗೂ ನೀಟ್ ಪರೀಕ್ಷೆಗಳನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸುವ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಈ ಹೇಳಿಕೆ ನೀಡಿದ್ದು, "ನಾನು ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ದಿಢೀರ್ ಪರೀಕ್ಷೆ ಎದುರಿಸಲು ಕಷ್ಟವಾಗುವ ಕಾರಣ ಕೇಂದ್ರ ಸರ್ಕರ ತನ್ನ ತೀರ್ಮಾನದಲ್ಲಿ ಮರುಹೊಂದಾಣಿಕೆ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.