ನವದೆಹಲಿ, ಸ .06 (DaijiworldNews/HR): ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ್ದ ಶೇಕಡಾ 72 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದು, ಭಾರತದ ಲಸಿಕೆಗಳು ವಿದೇಶಿ ಕೊರೊನಾ ಲಸಿಕೆಗಳಿಗೆ ಸಮನಾಗಿವೆ ಎಂದು ಶೇ 60ರಷ್ಟು ಮಂದಿ ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.
ಸಾಂಧರ್ಭಿಕ ಚಿತ್ರ
ಕೊರೊನಾ ಲಸಿಕೆ ಕುರಿತು ಜನರ ಹಿಂಜರಿಕೆ ಪ್ರಮಾಣವನ್ನು ತಿಳಿಯುವುದಕ್ಕಾಗಿ 'ಪಬ್ಲಿಕ್' ಎಂಬ ಸೋಷಿಯಲ್ ನೆಟ್ವರ್ಕಿಂಗ್ ಗ್ರೂಪ್ 'ಪಬ್ಲಿಕ್ ಕೀ ಆವಾಜ್ ಪೋಲ್' ನಡೆಸಿದ್ದು, ಈ ಸಮೀಕ್ಷೆಯಲ್ಲಿ 9,14,164 ಮಂದಿ ಭಾಗವಹಿಸಿದ್ದರು.
ಇನ್ನು ಸಮೀಕ್ಷೆಯ ಪ್ರಕಾರ, ಶೇ 8.8 ಮಂದಿ ಕೊರೊನಾ ವಿರುದ್ಧ ಲಸಿಕೆ ಪಡೆಯಲು ಹಿಂಜರಿಕೆ ವ್ಯಕ್ತಪಡಿಸಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಲಸಿಕೆ ಪಡೆಯುವುದು ಸುರಕ್ಷಿತ ಎಂದು ಭಾವಿಸಿದ್ದಾರೆ.
ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 25ರಷ್ಟು ಮಂದಿ ಈಗಾಗಲೇ ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿರುವುದಾಗಿ ತಿಳಿಸಿದ್ದು, ಶೇ 18ರಷ್ಟು ಮಂದಿ ಇನ್ನೂ ಒಂದು ಡೋಸ್ ಲಸಿಕೆ ಕೂಡ ಪಡೆದಿಲ್ಲ ಎಂದು ತಿಳಿಸಿದ್ದಾರೆ.