ನವದೆಹಲಿ, ಸ .06 (DaijiworldNews/HR): ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು "ಭಾರತದ ರಾಜಕಾರಣದ ರಾಜಕೀಯ ಕೋಗಿಲೆ" ಎಂದು ಬಿಜೆಪಿ ಬಣ್ಣಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, "ರಾಹುಲ್ ತಳಮಟ್ಟದಲ್ಲಿ ಕೆಲಸ ಮಾಡುವುದಿಲ್ಲ. ಅವರು ತಮ್ಮ ರಾಜಕೀಯ ಕಾರ್ಯಸೂಚಿಗಾಗಿ ಮತ್ತೊಬ್ಬರ ಹೆಗಲನ್ನು ಬಳಸುತ್ತಾರೆ. ಉತ್ತರಪ್ರದೇಶದಲ್ಲಿನ ರೈತರ ಮಹಾಪಂಚಾಯತ್ ಅನ್ನು ಉಲ್ಲೇಖಿಸುವಾಗ ರಾಹುಲ್ ಹಳೆಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಈ ಕ್ರಮವು ಗೊಂದಲ ಮತ್ತು ಸುಳ್ಳುಗಳನ್ನು ಹರಡುವ ರಾಜಕಾರಣವಾಗಿದೆ" ಎಂದು ಆರೋಪಿಸಿದ್ದಾರೆ.
ಇನ್ನು "ಕೋಗಿಲೆ ತನ್ನ ಸ್ವಂತ ಗೂಡು ಕಟ್ಟಿಕೊಳ್ಳದೇ ಮತ್ತೊಬ್ಬರ ಗೂಡನ್ನು ಆಶ್ರಯಿಸುತ್ತದೋ, ಅಂತೆಯೇ ರಾಹುಲ್ ಕೂಡಾ ಕಷ್ಟಪಟ್ಟು ಕೆಲಸ ಮಾಡುವುದಿಲ್ಲ. ಅದಕ್ಕಾಗಿ ಮತ್ತೊಬ್ಬರ ಹೆಗಲನ್ನು ಆಶ್ರಯಿಸುತ್ತಾರೆ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ರೈತರಿಗೆ ಸಮರ್ಪಿತವಾಗಿದ್ದು, ಮುಂದೆಯೂ ಅವರು ಹಾಗೇ ಇರುತ್ತಾರೆ. ಕೇಂದ್ರ 1.5 ಲಕ್ಷ ಕೋಟ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ" ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.