ಬೆಂಗಳೂರು, ಸೆ. 06 (DaijiworldNews/PY): "ಚಳವಳಿ ಮಾಡುವಷ್ಟು ಬೆಲೆಯೇರಿಕೆ ಆಗಿಲ್ಲ ಎಂದಿರುವ ಸಿ ಟಿ ರವಿ ಈ ರಾಜ್ಯದ ಪ್ರಥಮ ದರ್ಜೆಯ ಅವಿವೇಕಿ ಎಂಬುದನ್ನು ಸಾಬೀತುಪಡಿಸಿದ್ದಾರೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಚಳವಳಿ ಮಾಡುವಷ್ಟು ಬೆಲೆಯೇರಿಕೆ ಆಗಿಲ್ಲ ಎಂದಿರುವ ಸಿ ಟಿ ರವಿ ಈ ರಾಜ್ಯದ ಪ್ರಥಮ ದರ್ಜೆಯ ಅವಿವೇಕಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಜನರ ಸಮಸ್ಯೆಗಳ ಅರಿವೇ ಇಲ್ಲದೆ ಮಾತನಾಡುವ ಇವರು ಜನನಾಯಕರೇ? ರವಿಯಂತಹ ಕೋಟಿ ಕುಳಗಳಿಗೆ ಬೆಲೆಯೇರಿಕೆ ಸಮಸ್ಯೆಯಿಲ್ಲದಿರಬಹುದು. ಆದರೆ ಚಳವಳಿ ಮಾಡದಿರಲು ಎಲ್ಲರೂ ಸಿ.ಟಿ.ರವಿಯಂತೆ ಕೋಟಿ ಕುಳಗಳೆ?" ಎಂದು ಪ್ರಶ್ನಿಸಿದ್ದಾರೆ.
"ಬೆಲೆಯೇರಿಕೆಯನ್ನು ನಾಚಿಕೆ ಬಿಟ್ಟು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಸರ್ಟಿಫೈಡ್ ಕಿರಾತಕರಿದ್ದಂತೆ. ಹೊಟ್ಟೆ ಬಟ್ಟೆ ಕಟ್ಟಿ ಸಂಸಾರ ನಡೆಸುವವನಿಗೆ ಬೆಲೆಯೇರಿಕೆಯ ತಾಪವೇನು ಎಂದು ಗೊತ್ತಿದೆ. ಆದರೆ ಹೃದಯವೇ ಇಲ್ಲದ ಕಿರಾತಕರಿಗೆ ಜನರ ಗೋಳು ಹೇಗೆ ತಿಳಿಯಲು ಸಾಧ್ಯ?" ಎಂದು ಕೇಳಿದ್ದಾರೆ.
"ಕಾಂಗ್ರೆಸ್ ಚಳವಳಿ ಮಾಡುವಷ್ಟು ಮಟ್ಟಕ್ಕೆ ಬೆಲೆ ಏರಿಕೆ ಆಗಿಲ್ಲ. ಕಾಂಗ್ರೆಸ್ಸಿಗರು ಅಧಿಕಾರ ಬಿಟ್ಟು ಹೋಗುವಾಗ ಗ್ಯಾಸ್ ಬೆಲೆ 981 ರೂ. ಇತ್ತು. ಬೆಲೆ ಏರಿಕೆ ವಿರಿದ್ದ ಚಳುವಳಿ ಮಾಡುವ ನೈತಿಕ ಹಕ್ಕು ಕೂಡಾ ಕಾಂಗ್ರೆಸ್ಗೆ ಇಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಹೇಳಿದ್ದರು.